ದೇವರಪುರ ಶಾಲೆಯಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ದುಶ್ಚಟಗಳ ದುಷ್ಪರಿಣಾಮಗಳ ಜಾಗೃತಿ

Aug 1, 2026 - 17:10
 0  33
ದೇವರಪುರ ಶಾಲೆಯಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ದುಶ್ಚಟಗಳ ದುಷ್ಪರಿಣಾಮಗಳ ಜಾಗೃತಿ

ವಿರಾಜಪೇಟೆ: ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಶಾಲಾ ಹಂತದಲ್ಲೇ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ದೇವರಪುರದ ಶ್ರೀರಾಜೇಶ್ವರಿ ವಿದ್ಯಾನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಶಿಧರ್ ಹೇಳಿದರು.

   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿರಾಜಪೇಟೆ ತಾಲೂಕಿನ ಮಾಯಮುಡಿ ವಲಯದ ವತಿಯಿಂದ ಶ್ರೀರಾಜೇಶ್ವರಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ'ಸ್ವಾಸ್ಥ್ಯ ಸಂಕಲ್ಪ'ಜಾಗೃತಿ ಕಾರ್ಯಕ್ರಮದ ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲೇ ಇಂತಹ ಸದ್ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರಿಂದ ಅವರು ದಾರಿ ತಪ್ಪುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು.

ಆರೋಗ್ಯ ಹಾಗೂ ಗೌರವ ಹಾಳು ಮಾಡುವ ಅಭ್ಯಾಸ:

  ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಪ್ತ ಸಮಾಲೋಚಕಿ ರಮ್ಯಾ,"ನಮ್ಮ ಆರೋಗ್ಯ, ಕುಟುಂಬ ಹಾಗೂ ಸಮಾಜಕ್ಕೆ ಹಾನಿ ಉಂಟುಮಾಡುವ ಅಭ್ಯಾಸಗಳೇ ದುಶ್ಚಟಗಳು. ತಂಬಾಕು ಮತ್ತು ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಹಾಗೂ ಶ್ವಾಸಕೋಶದ ಕಾಯಿಲೆಗಳು ಬರುತ್ತವೆ. ಮದ್ಯಪಾನದಿಂದ ಲಿವರ್ ಹಾನಿಯಾದರೆ, ಡ್ರಗ್ಸ್ನಂತಹ ಮಾದಕ ವಸ್ತುಗಳು ಇಡೀ ಜೀವನವನ್ನೇ ಹಾಳುಮಾಡುತ್ತವೆ"ಎಂದು ಎಚ್ಚರಿಸಿದರು.

  ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಏಕಾಗ್ರತೆ ಕೊರತೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂದು ತಿಳಿಸಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  ಕಾರ್ಯಕ್ರಮದಲ್ಲಿ ಯೋಜನೆಯ ಕೃಷಿ ಮೇಲ್ವಿಚಾರಕ ವಸಂತ್, ಶಾಲಾ ಶಿಕ್ಷಕರಾದ ಶ್ವೇತಾ, ಮೋಹನ್, ರಾಣಿ, ಸೇವಾಪ್ರತಿನಿಧಿಗಳಾದ ಶಾಹಿರಾ, ಪುಷ್ಪ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0