ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ

Aug 12, 2026 - 18:00
 0  77
ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ

ಮಡಿಕೇರಿ ಆ.12 :-ನಗರದ ರಾಘವೇಂದ್ರ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಮತ್ತು ಎದೆಹಾಲಿನ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ವೈದ್ಯೆ ಡಾ.ಸುಕೃತಾ ಅವರು ಮಕ್ಕಳ, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ನಡೆಸಿ, ಚುಚ್ಚುಮದ್ದು ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಮಾಹಿತಿ ನೀಡಿದರು.

ಭಾಗವಹಿಸಿದ್ದ ಮಕ್ಕಳ ತೂಕ ಮತ್ತು ಎತ್ತರವನ್ನು ಪರಿಶೀಲಿಸಿ, ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಲಾಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಎದೆಹಾಲಿನ ಮಹತ್ವ ಕುರಿತು ಮಾಹಿತಿ ನೀಡಿದರು. ತಾಯಿಯ ಎದೆಹಾಲು ಮಗುವಿಗೆ ಕೇವಲ ಆಹಾರವಲ್ಲ; ಅದು ಮಗುವಿನ ಆರೋಗ್ಯ, ಬೆಳವಣಿಗೆ ಹಾಗೂ ರೋಗ ನಿರೋಧಕ ಶಕ್ತಿಗೆ ಪ್ರಕೃತಿಯ ಕೊಡುಗೆಯಾಗಿದೆ. ನವಜಾತ ಶಿಶುವಿಗೆ ಎದೆಹಾಲು ಅತ್ಯುತ್ತಮ ಹಾಗೂ ಸಂಪೂರ್ಣ ಪೌಷ್ಟಿಕ ಆಹಾರವಾಗಿದೆ ಎಂದು ತಿಳಿಸಿದರು.

ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಲು ಪ್ರಾರಂಭಿಸಿ, ಮೊದಲ ಆರು ತಿಂಗಳು ಕೇವಲ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರವನ್ನು ಆರಂಭಿಸಿ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಎದೆಹಾಲು ಮುಂದುವರಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದರು.

 ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ನೀಡುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಗಟ್ಟಿಯಾಗುವುದರ ಜೊತೆಗೆ ಮಗುವಿನ ದೇಹದ ಉಷ್ಣತೆಯನ್ನು ಕಾಪಾಡಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. ಮೊದಲ ಆರು ತಿಂಗಳಲ್ಲಿ ಎದೆಹಾಲಿನ ಹೊರತಾಗಿ ನೀರು, ಜೇನುತುಪ್ಪ, ಕಷಾಯ, ಗ್ಲುಕೋಸ್ ನೀರು ಅಥವಾ ಇತರ ಆಹಾರ ನೀಡಬಾರದು. ವೈದ್ಯಕೀಯ ಕಾರಣಕ್ಕಾಗಿ ಅಗತ್ಯವಿರುವ ಔಷಧಿಗಳನ್ನು ಹೊರತುಪಡಿಸಿ ಮಗುವಿಗೆ ಕೇವಲ ಎದೆಹಾಲನ್ನೇ ನೀಡಬೇಕು ಎಂದು ಸಲಹೆ ನೀಡಿದರು.

 ಎದೆಹಾಲಿನಲ್ಲಿರುವ ಪ್ರತಿಕಾಯಗಳು ಹಾಗೂ ಇತರ ರಕ್ಷಣಾತ್ಮಕ ಅಂಶಗಳು ಮಗುವನ್ನು ಅತಿಸಾರ, ನ್ಯುಮೋನಿಯಾ ಸೇರಿದಂತೆ ಹಲವು ಸಾಮಾನ್ಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅಲ್ಲದೆ, ಮಗುವಿನ ಮೆದುಳಿನ ಬೆಳವಣಿಗೆ, ಕಲಿಕೆ ಹಾಗೂ ಅರಿವಿನ ಬೆಳವಣಿಗೆಗೂ ಎದೆಹಾಲು ಸಹಕಾರಿಯಾಗಿದೆ.

ಸೂಕ್ತ ಪೌಷ್ಟಿಕಾಂಶ ದೊರೆಯುವುದರಿಂದ ಆರೋಗ್ಯಕರ ತೂಕ ಮತ್ತು ಎತ್ತರದ ಬೆಳವಣಿಗೆಗೆ ಸಹಾಯವಾಗುವುದರೊಂದಿಗೆ ಅಪೌಷ್ಟಿಕತೆ ಹಾಗೂ ಬಾಲ್ಯದ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ರಂಜಿತ್, ಆಶಾ ಕಾರ್ಯಕರ್ತೆ ಸಾಜಿದಾ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸಹಾಯಕಿ ಅನಿತಾ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0