ಮಹಿಳಾ ಶೌಚಾಲಯದಲ್ಲಿ ಗುಪ್ತ ಕ್ಯಾಮರಾ: ಥಿಯೇಟರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜ. 5: ನಗರದ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಬಳಸಿ ಯುವತಿಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಥಿಯೇಟರ್ ಹಾಗೂ ಅದರ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ಟೆಕ್ಕಿಯೊಬ್ಬರು ನೀಡಿದ ದೂರಿನ ಮೇರೆಗೆ ರಾಜೇಶ್ ಮತ್ತು ಕಮಲ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರವಿವಾರ ಸಂಜೆ ದೂರುದಾರೆ ತಮ್ಮ ಸ್ನೇಹಿತರೊಂದಿಗೆ ಸಂಧ್ಯಾ ಥಿಯೇಟರ್‌ಗೆ ಸಿನಿಮಾ ವೀಕ್ಷಣೆಗೆ ತೆರಳಿದ್ದರು. ವಿರಾಮದ ವೇಳೆ ರಾತ್ರಿ ಸುಮಾರು 8.30ರ ಹೊತ್ತಿಗೆ ದೂರುದಾರೆ ಮತ್ತು ಅವರ ಸ್ನೇಹಿತೆಯರು ಮಹಿಳಾ ಶೌಚಾಲಯಕ್ಕೆ ಹೋದಾಗ, ಅಲ್ಲಿನ ಮಧ್ಯಭಾಗದಲ್ಲಿ ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಬಳಸಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆತನನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ, ದೂರುದಾರೆ ಹಾಗೂ ಅವರ ಸ್ನೇಹಿತೆಯರ ಖಾಸಗಿ ದೃಶ್ಯಗಳು ಅದರಲ್ಲಿ ದಾಖಲಾಗಿರುವುದು ಪತ್ತೆಯಾಗಿದೆ.
ಈ ವಿಷಯವನ್ನು ಥಿಯೇಟರ್ ನಿರ್ವಹಣೆಯ ಗಮನಕ್ಕೆ ತಂದಾಗ, ಆರೋಪಿತ ರಾಜೇಶ್ ಸುಮಾರು ಒಂದು ತಿಂಗಳಿನಿಂದ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಲಾಗಿದೆ. ವಿಡಿಯೋ ಚಿತ್ರೀಕರಣಕ್ಕೆ ಯಾರು ಸೂಚನೆ ನೀಡಿದರು ಎಂದು ಪ್ರಶ್ನಿಸಿದಾಗ, ಕಮಲ್ ಎಂಬ ವ್ಯಕ್ತಿಯ ಹೆಸರನ್ನು ರಾಜೇಶ್ ಉಲ್ಲೇಖಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಬಳಿಕ ದೂರುದಾರೆ 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಬಳಸಿದ್ದ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ಇತರ ಯುವತಿಯರ ಖಾಸಗಿ ವಿಡಿಯೋಗಳೂ ಪತ್ತೆಯಾಗಿದ್ದು, ಇಂತಹ ಕೃತ್ಯಗಳು ಹಿಂದಿನಿಂದಲೂ ನಡೆಯುತ್ತಿದ್ದವೆಯೇ ಎಂಬ ದಿಸೆಯಲ್ಲಿ ತನಿಖೆ ನಡೆಯುತ್ತಿದೆ.
ಈ ಸಂಬಂಧ,ರಾಜೇಶ್, ಕಮಲ್ ಹಾಗೂ ಸಂಧ್ಯಾ ಥಿಯೇಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.