ಶಾಂತಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ

Feb 4, 2026 - 20:22
 0  351
ಶಾಂತಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ

ಸೋಮವಾರಪೇಟೆ: ಸನಾತನ ಹಿಂದೂ ಧರ್ಮ-ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು. ಹಾಗಾದಾಗ ಹಲವಷ್ಟು ಸಮಸ್ಯೆಗಳು ತನ್ನಿಂತಾನೇ ಬಗೆಹರಿಯುತ್ತವೆ. ಮನೆ ಹಾಗೂ ಮನಗಳಲ್ಲಿ ಧರ್ಮ ಇರಬೇಕು ಎಂದು ಯಸಳೂರು ತೆಂಕಲಗೋಡು ಮಠಾಧೀಶರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಮುಂಭಾಗ ಇಚೆಗೆ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಸ್ಥಾನಮಾನವಿದೆ. ಇತರ ಎಲ್ಲಾ ಧರ್ಮದವರಿಗೆ ಜೀವಿಸಲು ಸಾಕಷ್ಟು ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ತಮ್ಮ ಧರ್ಮದ ಅನುಸಾರ ಜೀವನ ನಡೆಸಲು ಇರುವುದೊಂದೇ ಹಿಂದೂಸ್ಥಾನ. ಇದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಯುವ ಜನಾಂಗ ದೇಶಪ್ರೇಮ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟçಕ್ಕಾಗಿ ಬದುಕುವ ಸಂಕಲ್ಪ ತೊಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೇವಲ ಹಣ ಗಳಿಸುವ ಶಿಕ್ಷಣ ನೀಡಿದರಷ್ಟೇ ಸಾಲದು; ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಕಿವಿಮಾತು ನುಡಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಭಾಗ ಸಹ ವ್ಯವಸ್ಥಾ ಪ್ರಮುಖ್ ಸ್ವಾಮಿಪ್ರಸಾದ್ ಅವರು, ರಾಷ್ಟ್ರ, ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ನಮ್ಮ ಪಾತ್ರ ಏನು? ಎಂಬುದರ ಬಗ್ಗೆ ಜಾಗೃತಗೊಳ್ಳಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶದಲ್ಲಿ 80 ಸಾವಿರ ಕಡೆಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದೆ ಎಂದರು.

ಹಿಂದೂ ಕುಟುಂಬಗಳು ಮೌಲ್ಯವನ್ನು ಕಳೆದುಕೊಳ್ಳಬಾರದು. ಪರಿಸರ ಸಂರಕ್ಷಣೆ, ಸಾಮರಸ್ಯ, ನಾಗರಿಕ ಶಿಷ್ಟಾಚಾರ, ಸ್ವದೇಶೀ ಭಾವ ಜಾಗೃತವಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 100ರ ಸಂಭ್ರಮದಲ್ಲಿ ಸಮಾಜದ ಸುಧಾರಣೆಗೆ ಇನ್ನಷ್ಟು ವೇಗ ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಕಾಳಪ್ಪ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಗೌರವಾಧ್ಯಕ್ಷ ಎಸ್.ಜಿ. ಮೇದಪ್ಪ, ಅಧ್ಯಕ್ಷ ಲಿಂಗರಾಜು ಇದ್ದರು. ಇದಕ್ಕೂ ಮುನ್ನ ತಲ್ತರೆ ಜಂಕ್ಷನ್‌ನಿಂದ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಪುಟಾಣಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸಿ ಸಂಭ್ರಮದಿಂದ ಸಾಗಿದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0