ಹೊದ್ದೂರು:ಚಾಲಕನ ನಿಯಂತ್ರಣ ತಪ್ಪಿ ಟಿಂಬರ್ ಲಾರಿ ಪಲ್ಟಿ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಸಿಲ್ವರ್ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದ್ದೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ನಾಪೋಕ್ಲು ಕಡೆಯಿಂದ ಮೂರ್ನಾಡು ಮಾರ್ಗವಾಗಿ ಕೇರಳಕ್ಕೆ ಸಿಲ್ವರ್ ಮರದ ನಾಟಗಳನ್ನು ತುಂಬಿ ಸಾಗುತ್ತಿರುವ ಸಂದರ್ಭ ಹೊದ್ದೂರು ಗ್ರಾಮದ ಬಳಿಯ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ಅಪಘಾತದಿಂದ ಮೂರು ವಿದ್ಯುತ್ ಕಂಬಗಳಿಗೆ, ರಸ್ತೆ ಬದಿ ಮನೆಯ ಕಾಂಪೌಂಡ್ ಹಾಗೂ ಗೇಟಿಗೆ ಹಾನಿಯಾಗಿದೆ. ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದು ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸೆಸ್ಕ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, 112 ಪೊಲೀಸರು ಸಾರ್ವಜನಿಕರ ಸಹಕಾರದಿಂದ ರಸ್ತೆಯಲ್ಲಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಪಘಾತದಿಂದ ಲಾರಿಯ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.