ಪವಿತ್ರ ಕಾವೇರಿ ತೀರ್ಥೋದ್ಭವ: ಶಾಸಕರಾಗಿ ಸತತ 3ನೇ ವರ್ಷ ಕಾಲ್ನಡಿಗೆಯಲ್ಲಿ ತೆರಳಿದ ಶಾಸಕ ಎ.ಎಸ್ ಪೊನ್ನಣ್ಣ
admincoorgdaily
ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ತಾಯಿ ಕಾವೇರಿ ತೀರ್ಥೋದ್ಭವ ಉತ್ಸವದಲ್ಲಿ ಭಾಗವಹಿಸಿದರು. ಬೆಳಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾಲ್ನಡಿಗೆ ಮೂಲಕ ತಲಕಾವೇರಿಗೆ ಸನ್ನಿಧಿಗೆ ಹೆಜ್ಜೆ ಹಾಕಿದರು.
ಸಾವಿರಾರು ಭಕ್ತಾದಿಗಳೊಂದಿಗೆ ತಾಯಿ ಕಾವೇರಿ ಸನ್ನಿಧಿಗೆ ಹೆಜ್ಜೆ ಹಾಕುವ ಸಂದರ್ಭ, ಶಾಸಕರೊಂದಿಗೆ ಅವರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು, ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ರವರು ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು. ತಾಯಿ ಕಾವೇರಿ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ತಲುಪಿದ ಮಾನ್ಯ ಶಾಸಕ ದಂಪತಿಯವರು, ಮಧ್ಯಾಹ್ನ 01.44ಕ್ಕೆ ಸರಿಯಾಗಿ ತೀರ್ಥ ಸ್ವರೂಪಿಣಿಯಾಗಿ ಉಗಮಿಸಿದ ತಾಯಿ ಕಾವೇರಿಯನ್ನು ಕಣ್ತುಂಬಿಕೊಂಡು ಪುನೀತರಾದರು.
ಗಣ್ಯರೊಂದಿಗೆ ತಾಯಿ ಕಾವೇರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾನ್ಯ ಶಾಸಕರು, ನಾಡಿನ ಸುಭಿಕ್ಷೆ, ಶಾಂತಿ, ಸೌಹಾರ್ದತೆ ಹಾಗೂ ಉನ್ನತಿಗಾಗಿ ಪ್ರಾರ್ಥಿಸಿದರು. ಬಳಿಕ ತಲಕಾವೇರಿ ಸನ್ನಿದಿಯಲ್ಲಿ ಅನ್ನಪ್ರಸಾದ ಸ್ವೀಕರಿಸಿದ ಶಾಸಕರು, ಬಳಿಕ ಭಕ್ತಾದಿಗಳಿಗೆ ಸ್ವತಹ ಅನ್ನ ಬಡಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಣ್ಯರಿಗೆ ಶಾಸಕರು ವೈಯುಕ್ತಿಕ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ವಾಪಸ್ಸು ತೆರಳುವ ಸಂದರ್ಭ, ಭಾಗಮಂಡಲದಲ್ಲಿ ಗಜಾನನ ಯುವಕ ಸಂಘದ ವತಿಯಿಂದ, ಉಚಿತ ಸಾರ್ವಜನಿಕ ಅನ್ನ ಸಂತರ್ಪಣೆ ಜಾಗಕ್ಕೆ ಭೇಟಿ ನೀಡಿದ ಮ ಶಾಸಕರು ಯುವಕ ಸಂಘದ ಪದಾಧಿಕಾರಿಗಳೊಂದಿಗೆ ತಾವೇ ಸ್ವತಹ, ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ, ಕೊಡಗು ಜಿಲ್ಲೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಸಂಸದರಾದ ಯದುವೀರ್ ವಡೆಯರ್, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ,ಚಿತ್ರ ನಟರಾದ ಭುವನ್ ಪೊನ್ನಣ್ಣ ಹಾಗೂ ಹರ್ಷಿಕ ಪೂಣಚ್ಚ, ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಮುಖರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ತಾಯಿ ಕಾವೇರಿ ಭಕ್ತರು ಉಪಸ್ಥಿತರಿದ್ದರು.