ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಗೃಹಿಣಿಯ ನಿಗೂಢ ಸಾವು: ಪತಿ ವಿರುದ್ಧ ಕೊಲೆ ಆರೋಪ
admincoorgdaily
ದಾವಣಗೆರೆ, ಅ.26: ಪ್ರೀತಿಸಿ ಮದುವೆಯಾದ ಯುವತಿಯ ನಿಗೂಢ ಸಾವು ಪ್ರಕರಣ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿದೆ. ಮದುವೆಯಾಗಿ ಕೇವಲ ಎರಡೇ ವರ್ಷದಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿ ವಿರುದ್ಧ ಕೊಲೆ ಆರೋಪಗಳು ಕೇಳಿಬಂದಿವೆ.
ಮೃತರನ್ನು ಜುನೇರಾ ಕೌಸರ್ (19) ಎಂದು ಗುರುತಿಸಲಾಗಿದೆ. ಪತಿ ಜಿಶಾನ್ (23) ಅಡಿಕೆ ವ್ಯಾಪಾರಿಯಾಗಿದ್ದಾನೆ. ಇಬ್ಬರು ಕಾಲೇಜು ದಿನಗಳಲ್ಲಿ ಪರಿಚಯವಾಗಿ ಪ್ರೀತಿಸಿ, ಪೋಷಕರ ಒಪ್ಪಿಗೆಯೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗು ಕೂಡ ಇದೆ.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತಿ-ಪತ್ನಿ ನಡುವೆ ಮನಸ್ತಾಪ ಉಂಟಾಗಿದ್ದು, ಜಿಶಾನ್ ಪದೇಪದೇ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪೂ ಇದೆ.
ಈ ಕಿರುಕುಳ ತಾಳಲಾರದೆ ಜುನೇರಾ ಕೆಲ ದಿನಗಳ ಹಿಂದೆ ತವರು ಮನೆಗೆ ತೆರಳಿದ್ದರು. ಬಳಿಕ ಇಬ್ಬರ ಕುಟುಂಬದವರ ನಡುವೆ ರಾಜಿ ಸಭೆ ನಡೆದು, ಮಗಳು ಮತ್ತೆ ಗಂಡನ ಮನೆಗೆ ಹಿಂತಿರುಗಿದ್ದರು. ಆದರೆ, ರಾಜಿ ನಡೆದ ಮೂರೇ ದಿನಗಳಲ್ಲಿ ಆಕೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಗುರುವಾರ ರಾತ್ರಿ ಕೌಸರ್ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಮತ್ತು ಕುಟುಂಬಸ್ಥರು ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅ.26ರಂದು ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತ ಕೌಸರ್ ದೇಹದ ಮೇಲೆ ಹಲ್ಲೆ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು ಪತಿ ಮತ್ತು ಆತನ ಕುಟುಂಬದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಚನ್ನಗಿರಿ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.