State News

ಅಣ್ಣನಾಗಬೇಕಿದ್ದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ; ಸೆಲ್ಫಿ ವಿಡಿಯೋ ಬಳಿಕ ಯುವತಿ ಆತ್ಮಹತ್ಯೆ

admincoorgdaily

Photo credit: TV09

ಬಳ್ಳಾರಿ, ಡಿ.22: ಗಂಡನಿಂದ ವಿಚ್ಛೇದನ ಪಡೆದ ಬಳಿಕ ವಿವಾಹಿತ ವ್ಯಕ್ತಿಯೊಂದಿಗಿನ ಸಂಬಂಧದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಯುವತಿಯೊಬ್ಬರು, ಸೆಲ್ಫಿ ವಿಡಿಯೋ ದಾಖಲಿಸಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಹುಸೇನ್ ನಗರದಲ್ಲಿ ನಡೆದಿದೆ.

ಮೃತಳನ್ನು ಮುನ್ನಿ (23) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಮುನ್ನಿ, ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಪತಿಯಿಂದ ವಿಚ್ಛೇದನ ಪಡೆದು, ತನ್ನ ಎರಡು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ವಿವಾಹಿತ ವ್ಯಕ್ತಿಯೊಂದಿಗೆ ಪರಿಚಯ ಬೆಳೆದು, ಅದು ನಂತರ ವೈಯಕ್ತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ವಾಗ್ವಾದಗಳು ನಡೆಯುತ್ತಿದ್ದವು ಎಂದು ಮೃತಳ ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯ ದಿನ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುನ್ನಿ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ದಾಖಲಿಸಿ, ತಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡದ ಬಗ್ಗೆ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತಳ ಸಂಬಂಧಿಕರ ಪ್ರಕಾರ, ವಿವಾಹಿತ ವ್ಯಕ್ತಿಯ ಸಂಬಂಧದಲ್ಲಿ ಆಕೆಗೆ ಅಣ್ಣನಾಗಬೇಕಿದ್ದ ವ್ಯಕ್ತಿಯಾಗಿದ್ದು, ಈ ಸಂಬಂಧಕ್ಕೆ ಕುಟುಂಬವು ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮಾನಸಿಕ ಕಿರುಕುಳ ಉಂಟಾಗಿತ್ತು ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.

ಈ ಪ್ರಕರಣ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.