ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

Jul 31, 2026 - 16:03
 0  30
ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ಪೊನ್ನಂಪೇಟೆ, ಜು. 31:  ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಟ್ಟಂಗಾಲದ ಕ್ರೇಡೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಅಪೂರ್ವ ಪ್ರಸನ್ನ ಎಂ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಟ್‌ ಜಿಪಿಟಿ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ವೈಯಕ್ತಿಕ ಗೌಪ್ಯತೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟು ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ತಂತ್ರಜ್ಞಾನವನ್ನು ಅಗತ್ಯವಿರುವ ಮಟ್ಟಿಗೆ ಮಾತ್ರ ಬಳಸಬೇಕು. ಯಾವುದೇ ಕೃತಕ ಬುದ್ಧಿಮತ್ತೆ (AI) ಸಾಧನವನ್ನು ಸಂಪೂರ್ಣವಾಗಿ ಅವಲಂಬಿಸುವ ಬದಲು, ಸ್ವತಂತ್ರ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣಗಳು ಹಾಗೂ ಎಐ ಆಧಾರಿತ ಸೇವೆಗಳನ್ನು ಬಳಸುವಾಗ ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಮಾನಸಿಕ ಒತ್ತಡ ಅಥವಾ ವೈಯಕ್ತಿಕ ಸಮಸ್ಯೆಗಳಿದ್ದರೆ ಯಂತ್ರಗಳಿಗಿಂತ ಕುಟುಂಬದವರು, ಶಿಕ್ಷಕರು, ಸ್ನೇಹಿತರು ಅಥವಾ ವೈದ್ಯರೊಂದಿಗೆ ಚರ್ಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಮತ್ತು ಯುವಜನರು ದಿನನಿತ್ಯ ಪುಸ್ತಕ ಓದುವ ಅಭ್ಯಾಸ, ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದರು. ಅಲ್ಲದೆ, ಧೂಮಪಾನ, ಮದ್ಯಪಾನ ಹಾಗೂ ಇತರ ವ್ಯಸನಗಳಿಂದ ದೂರವಿರುವಂತೆ ಕರೆ ನೀಡಿದ ಅವರು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಮಂಡೆಪಂಡ ಸುಗುಣ ಮುತ್ತಣ್ಣ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿದ್ದರೂ ಕಾವೇರಿ ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣ, ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣದ ಮೂಲಕ ಉತ್ತಮ ಹೆಸರು ಗಳಿಸಿರುವ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಳ್ಳಬೇಕು. ಸ್ವಚ್ಛ ಹಾಗೂ ಅಚ್ಚುಕಟ್ಟಾದ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಬೇಕು. ಉಡುಗೆ, ನಡವಳಿಕೆ ಮತ್ತು ವ್ಯಕ್ತಿತ್ವದಲ್ಲಿ ಸೌಜನ್ಯವನ್ನು ಬೆಳೆಸಿಕೊಳ್ಳುವುದು ಯಶಸ್ಸಿನ ಪ್ರಮುಖ ಅಂಶವಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಶೇ. 100 ರಷ್ಟು ಅಂಕಗಳಿಸಿದ ಫರ್ಹಾನ, ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ. 100ರಷ್ಟು ಅಂಕ ಪಡೆದ ಗಾನವಿ, ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿ, ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪೂಜಾ ಹಾಗೂ ವೈದ್ಯಕೀಯ ಸೇವೆಗಾಗಿ ಡಾ. ಅಪೂರ್ವ ಪ್ರಸನ್ನ ಎಂ ಅವರನ್ನು ಸನ್ಮಾನಿಸಲಾಯಿತು.

 ಪ್ರಾಂಶುಪಾಲರಾದ ಪ್ರೊ. ಎಸ್. ಎಸ್. ಮಾದಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ವಿಪ್ರ ನೀಲಮ್ಮ ವೇದಿಕೆಯಲ್ಲಿದ್ದರು. ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಎಂ. ಬಿ. ಕಾವೇರಿಯಪ್ಪ, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0