ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಿ-2026: ರಾಜ್ಯ ಮಟ್ಟದಲ್ಲಿ ಮಿಂಚಿದ ಕೊಡಗು;ತನ್ವೀರ್ ಅತ್ಯುತ್ತಮ ಡಿಫೆಂಡರ್,ಮಣಿ ಅತ್ಯುತ್ತಮ ಗೋಲ್ ಕೀಪರ್

Jul 16, 2026 - 14:42
 0  137
ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಿ-2026: ರಾಜ್ಯ ಮಟ್ಟದಲ್ಲಿ ಮಿಂಚಿದ ಕೊಡಗು;ತನ್ವೀರ್ ಅತ್ಯುತ್ತಮ ಡಿಫೆಂಡರ್,ಮಣಿ ಅತ್ಯುತ್ತಮ ಗೋಲ್ ಕೀಪರ್

ಮಡಿಕೇರಿ: ಕರ್ನಾಟಕ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾದ ಪ್ರತಿಷ್ಠಿತ ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಮೆಂಟ್-2026ರಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ರನ್ನರ್ಸ್ ಅಪ್ ಸ್ಥಾನಕ್ಕೆ ಭಾಜನವಾಗಿದೆ.

ಫೈನಲ್ ಪಂದ್ಯದಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಬಲಿಷ್ಠ ಬೆಂಗಳೂರು ಜಿಲ್ಲಾ ತಂಡದ ವಿರುದ್ಧ ಸೆಣಸಾಟ ನಡೆಸಿತು. ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ನಿಗದಿತ ಅವಧಿಯ ಅಂತ್ಯಕ್ಕೆ ಎರಡೂ ತಂಡಗಳು ತಲಾ ಒಂದು ಗೋಲು ಬಾರಿಸಿ 1-1 ಸಮಬಲ ಸಾಧಿಸಿತು.

ನಂತರ ಪಂದ್ಯವನ್ನು ನಿರ್ಧರಿಸಲು ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಬೆಂಗಳೂರು ತಂಡ 5-3 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಕೊಡಗು ತಂಡವು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಟೂರ್ನಿಯುದ್ದಕ್ಕೂ ಕೊಡಗು ತಂಡವು ಸಂಘಟಿತ ಆಟ, ಶಿಸ್ತು ಮತ್ತು ಹೋರಾಟದ ಮನೋಭಾವ ಪ್ರದರ್ಶಿಸಿತು. ಹಲವು ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಕೊಡಗು ತಂಡದ ಪ್ರದರ್ಶನ ರಾಜ್ಯದ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ವಿಶೇಷವಾಗಿ ತಂಡದ ನಾಯಕ ವಿಜು ಅವರ ನಾಯಕತ್ವ, ಆಟಗಾರರ ನಡುವಿನ ಹೊಂದಾಣಿಕೆ ಹಾಗೂ ತಂಡದ ಏಕತೆ ಪ್ರಶಂಸೆಗೆ ಪಾತ್ರವಾಯಿತು.

ತಂಡದ ಯಶಸ್ಸಿನ ಹಿಂದೆ ಮುಖ್ಯ ಕೋಚ್ ಜಗದೀಶ್ ಪಾಣತಾಲೆ , ಸಹಾಯಕ ಕೋಚ್ ದೀಪು ಮಾಚ್ಚಯ್ಯ ಹಾಗೂ ಮ್ಯಾನೇಜರ್ ದರ್ಶನ್ ಸುಕುಮಾರ್ ಅವರ ಶ್ರಮ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಆಟಗಾರರಿಗೆ ಸೂಕ್ತ ತರಬೇತಿ ಹಾಗೂ ಆತ್ಮವಿಶ್ವಾಸ ತುಂಬಿದ ಪರಿಣಾಮ ಕೊಡಗು ತಂಡವು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯ ವೈಯಕ್ತಿಕ ಪ್ರಶಸ್ತಿಗಳಲ್ಲೂ ಕೊಡಗು ತಂಡ ಮಿಂಚಿದೆ. ಕೊಡಗಿನ ಮಣಿಕಂಠ ಅವರು ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಯನ್ನು ಪಡೆದು ತಮ್ಮ ಅದ್ಭುತ ಗೋಲ್‌ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅದೇ ರೀತಿ ತನ್‌ವೀರ್ ಚಿನ್ನು ಅವರು ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಪಡೆದು ತಂಡದ ರಕ್ಷಣಾ ವಿಭಾಗದಲ್ಲಿ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0