ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿಗೆ ಚಾಲನೆ

Aug 6, 2026 - 12:48
 0  72
ಕೊಡಗು ವಿದ್ಯಾಲಯದಲ್ಲಿ ಅಂತರ್-ಶಾಲಾ ಬೆಳ್ಳಿ ಹಬ್ಬದ ಚೆಸ್ ಪಂದ್ಯಾವಳಿಗೆ ಚಾಲನೆ

ಮಡಿಕೇರಿ: ಕೊಡಗು ವಿದ್ಯಾಲಯದಲ್ಲಿ 25ನೇ ವರ್ಷದ ಅಂತರ್-ಶಾಲಾ ಚೆಸ್ ಪಂದ್ಯಾವಳಿಗೆ ಶಾಲೆಯ ಬಿ.ಕೆ. ಸುಬಯ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಮಾತನಾಡಿ, ಚೆಸ್ ಕೇವಲ ಆಟವಲ್ಲ; ಅದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಬೌದ್ಧಿಕ ಕ್ರೀಡೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಚೆಸ್‌ನಂತಹ ಕೌಶಲ್ಯಾಧಾರಿತ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

 ಅಧ್ಯಕ್ಷತೆ ವಹಿಸಿದ್ದ ಅನಂತ ಶಯನ ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ತಾಳ್ಮೆ ಮತ್ತು ಏಕಾಗ್ರತೆ ಅತ್ಯಗತ್ಯವಾಗಿದೆ. ಚೆಸ್ ಆಟವು ವಿದ್ಯಾರ್ಥಿಗಳಲ್ಲಿ ಚಿಂತನಶಕ್ತಿ, ಯೋಜನಾ ಸಾಮರ್ಥ್ಯ, ಸಹನೆ ಹಾಗೂ ಸಮಸ್ಯೆಗಳನ್ನು ವಿಶ್ಲೇಷಿಸುವ ಕೌಶಲ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಅವರು ರಚಿಸಿರುವ " ಹೌ ಟು ಇಂಪ್ರೂವ್ ಚೆಸ್ " ಕೃತಿಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಚೆಸ್ ಕ್ಷೇತ್ರಕ್ಕೆ ಶಂಕರ್ ನಾರಾಯಣ ಅವರು ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು.

 ಈ ವರ್ಷದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ 18 ಶಾಲೆಗಳಿಂದ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೂರು ದಿನಗಳ ಕಾಲ, ವಿವಿಧ ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶಾಲಾ ಸಮಿತಿ ಸದಸ್ಯ ಗುರುದತ್ತ್ ಸಿ ಎಸ್ ಪ್ರಾಂಶುಪಾಲೆ ಕೆ. ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥ ರವಿ ಪಿ., ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

 25 ವರ್ಷಗಳ ಚೆಸ್ ಪಂದ್ಯಾವಳಿ ಕುರಿತು ಶಿಕ್ಷಕಿ ಸೋನಾ ಮುತ್ತಮ್ಮ ವರದಿ ವಾಚಿಸಿದರು. ಶಿಕ್ಷಕಿ ಭಾರತಿ ಕೆ.ಕೆ. ಅವರು ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಅವರ ಪರಿಚಯವನ್ನು ಮಾಡಿದರು.ವಿದ್ಯಾರ್ಥಿನಿ ಸಾನ್ವಿಕ ಸ್ವಾಗತಿಸಿದರು. ವಿದ್ಯಾರ್ಥಿನಿ ಆನ್ಯ ನಂಜಪ್ಪ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ವಿದ್ಯಾರ್ಥಿನಿ ಅಮೃತ ನೀಲಮ್ಮ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0