ಕೊಡಗು ವಿದ್ಯಾಲಯದಲ್ಲಿ ಅಂತರ್ ಶಾಲಾ ಚೆಸ್ ಪಂದ್ಯಾವಳಿ ಸಮಾರೋಪ
admincoorgdaily

ಮಡಿಕೇರಿ, ಆ. 7: ಕೊಡಗು ವಿದ್ಯಾಲಯ, ಮಡಿಕೇರಿಯಲ್ಲಿನ ಚೆಸ್ ಪಂದ್ಯಾವಳಿಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಸಿಲ್ವರ್ ಜುಬಿಲಿ ಅಂತರಶಾಲಾ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಚೆಸ್ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಮಾತನಾಡಿ, "ಕಲಿಕೆಯೇ ನಮ್ಮ ಮುಖ್ಯ ಧ್ಯೇಯವಾಗಿದೆ. . ಗೆಲುವು ಮತ್ತು ಸೋಲು ಪ್ರತಿಯೊಂದು ಆಟದ ಸಹಜವಾದ ಭಾಗ. ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುತ್ತವೆ. ತರಬೇತುದಾರನಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂದರ್ಭದಲ್ಲಿ ಅವರಿಂದಲೂ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ಈ ಚೆಸ್ ಅಕಾಡೆಮಿಯು ನನಗೆ ಅಮೂಲ್ಯ ಅನುಭವವನ್ನು ನೀಡಿದೆ. ವಿದ್ಯಾರ್ಥಿಗಳು ತೋರಿದ ಉತ್ಸಾಹ ಶ್ಲಾಘನೀಯವಾಗಿದ್ದು, ಇದೇ ಉತ್ಸಾಹವನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು," ಎಂದು ಕರೆ ನೀಡಿದರು.ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರಾ ಕೆ. ಎಸ್., ಆಡಳಿತ ಮುಖ್ಯಸ್ಥ ರವಿ ಪಿ. ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ದಾಮೋದರ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಶ್ರಮ ಮತ್ತು ಸಹಕಾರವನ್ನು ಶ್ಲಾಘಿಸಿದರು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಕ್ರೀಡಾಸ್ಫೂರ್ತಿ, ಸ್ನೇಹ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು.
ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ಪಂದ್ಯಾವಳಿಯಲ್ಲಿ ವಿಜೇತರಾದವರು: ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ವಿಭಾ ಶೆಟ್ಟಿ ಡಿ. (ಸೇಂಟ್ ಮೈಕೇಲ್ಸ್ ಇಂಗ್ಲಿಷ್ ಸ್ಕೂಲ್) ಪ್ರಥಮ, ರಿಷಿತಾ ಟಿ.ಪಿ. (ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್) ದ್ವಿತೀಯ, ಜನ್ಯ ಎಂ.ವಿ. (ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್) ತೃತೀಯ ಹಾಗೂ ಜೆನೆಲಿಯಾ ಧೀನಾ (ಸೇಂಟ್ ಜೋಸೆಫ್ಸ್ ಕಾನ್ವೆಂಟ್) ಚತುರ್ಥ
. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸಶಿಕಾಂತ್ ಕೆ. (ಸೈನಿಕ್ ಸ್ಕೂಲ್ ಕೊಡಗು) ಪ್ರಥಮ, ಅಯಾನ್ ವಂದ ಕುದ್ರಿ (ಕೊಡಗು ವಿದ್ಯಾಲಯ) ದ್ವಿತೀಯ, ಕೃಪಾಲ್ ಕುಲಾಲ್ ವಿ.ಎಂ. (ಸೇಂಟ್ ಮೈಕೇಲ್ಸ್ ಇಂಗ್ಲಿಷ್ ಸ್ಕೂಲ್) ತೃತೀಯ ಹಾಗೂ ಸಾತ್ವಿಕ್ ಎಸ್.ಎಸ್. (ಸೈನಿಕ್ ಸ್ಕೂಲ್ ಕೊಡಗು) ಚತುರ್ಥ
. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಧೃತಿ ಬಿ.ಡಿ. (ಸೇಂಟ್ ಜೋಸೆಫ್ಸ್ ಕಾನ್ವೆಂಟ್) ಪ್ರಥಮ, ತ್ರಿನಮ್ ಕೆ.ಆರ್. (ಸೈನಿಕ್ ಸ್ಕೂಲ್ ಕೊಡಗು) ದ್ವಿತೀಯ, ಲಕ್ಷ್ಯ ಪೊನ್ನಕ್ಕ ಕೆ.ಎಂ. (ಕೊಡಗು ವಿದ್ಯಾಲಯ) ತೃತೀಯ ಹಾಗೂ ಕೆ. ಸಂಯಮಾ ವಿಟ್ಟಲ್ (ವಿಶ್ವ ಮಾನವ ಕುವೆಂಪು ವಿದ್ಯಾ ಸಂಸ್ಥೆ) ಚತುರ್ಥ
. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಉನ್ನತ್ ಸಾರಥ್ಯ ಪಿ.ಎಸ್. (ಜ್ಞಾನಗಂಗಾ ರೆಸಿಡೆನ್ಶಿಯಲ್ ಸ್ಕೂಲ್, ಆತ್ತೂರು) ಪ್ರಥಮ, ತರುಣ್ ನಾಯಕ್ (ಸೇಂಟ್ ಜೋಸೆಫ್ಸ್ ಕಾನ್ವೆಂಟ್) ದ್ವಿತೀಯ, ಅರುಷ್ ಅಭಿನಂದನ್ ವಂದ ಕುದ್ರಿ (ಕೊಡಗು ವಿದ್ಯಾಲಯ) ತೃತೀಯ ಹಾಗೂ ಸಂಸ್ಕಾರ್ ಎಂ. (ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್) ಚತುರ್ಥ .
ವಿದ್ಯಾರ್ಥಿನಿ ತೃಪ್ತಿ ಸ್ವಾಗತಿಸಿ, ವಿದ್ಯಾರ್ಥಿನಿ ಲಕ್ಷ್ಯ ಪೊನ್ನಕ್ಕ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಸೋನಾ ಮುತ್ತಮ್ಮ ನಿರೂಪಿಸಿ, ವಿದ್ಯಾರ್ಥಿ ಆದಿತ್ಯ ವಂದಿಸಿದರು.