ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳ ಆರಂಭ

Aug 21, 2026 - 16:26
 0  73
ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳ ಆರಂಭ

ಮಡಿಕೇರಿ ಆ.21:-ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ ನೂತನವಾಗಿ ಜಾರಿಗೆ ಬಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‍ಗಾರ್ ಮತ್ತು ಅಜೀವಿಕ್ ಮಿಷನ್ ಗ್ರಾಮೀಣ-2026 ಯೋಜನೆಯಡಿ ಜಿಲ್ಲೆಯಾದ್ಯಂತ ಸೆಪ್ಟಂಬರ್ 15 ರ ವರೆಗೆ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ನಡೆಯಲಿದೆ ಎಂದು ಕೊಡಗು ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ. 

ಜಿಲ್ಲೆಯ 102 ಗ್ರಾಮ ಪಂಚಾಯತ್ ಗಳಲ್ಲಿ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. 

ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಸಮುದಾಯ ಆಧಾರಿತ ಮತ್ತು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ವೈಯಕ್ತಿಕ ಬಾವಿ, ದನದ ಕೊಟ್ಟಿಗೆ, ಕೋಳಿ ಶೆಡ್ ಸೇರಿದಂತೆ ಒಟ್ಟಾರೆ 318 ಕಾಮಗಾರಿಗಳಿಗೆ ಅವಕಾಶವಿದೆ ಎಂದು ತಿಳಿಸಿದರು.

ಹಿಂದಿನ ನರೇಗಾ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ನೂತನ ವಿಬಿ ಜಿ ರಾಮ್ ಜಿ ಯಲ್ಲಿ 125 ದಿನಗಳ ಉದ್ಯೋಗವನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದರು. 

ಈಗಾಗಲೇ ಗ್ರಾ.ಪಂ.ಗಳು ನಿಯಮಾನುಸಾರ ಕ್ರಿಯಾಯೋಜನೆ ಸಲ್ಲಿಸಿದ್ದು, ಅವುಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿಯೂ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳು ಆರಂಭಗೊಂಡಿದ್ದು, ಗ್ರಾಮೀಣ ಜನರಿಗೆ ದಿನವೊಂದಕ್ಕೆ ರೂ. 382 ಕೂಲಿ ನಿಗದಿಪಡಿಸಲಾಗಿದೆ ಎಂದರು. 

ನಮೂನೆ-6 ರಲ್ಲಿ ಕೆಲಸಕ್ಕೆ ಬೇಡಿಕೆ ಸಲ್ಲಿಸಿದಲ್ಲಿ 15ದಿನಗಳ ಒಳಗಾಗಿ ಗ್ರಾ.ಪಂ.ವತಿಯಿಂದ ಉದ್ಯೋಗ ಒದಗಿಸಲಾಗುತ್ತದೆ. ಕೊಡಗಿನ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. 

ಜಿಲ್ಲೆಯಾದ್ಯಂತ ಜಾಬ್ ಕಾರ್ಡ್ ಮೇಳವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಸಲುವಾಗಿ 5 ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಜಾಬ್ ಕಾರ್ಡ್ ಪಡೆದುಕೊಳ್ಳಲು ಹಾಗೂ ಕಾಮಗಾರಿ ಪಡೆಯಲು ಮತ್ತು ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಲು ಇಚ್ಛಿಸುವ ಗ್ರಾಮೀಣ ಭಾಗದ ಜನರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಬಾಕ್ಸ್: ಜಾಬ್ ಕಾರ್ಡ್ ಮೇಳದ ಅಂಗವಾಗಿ 20-08-2026 ರಂದು ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಜಾಬ್ ಕಾರ್ಡ್ ಮೇಳ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ದೊರಕುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0