ಕೆಪಿಎಸ್‌ಸಿ 1.50 ಕೋಟಿ ಲಂಚ ಆರೋಪ: ಶಿಕ್ಷಣ ಖಾತೆ ಹೊಂದಿರುವ ಡಿಕೆಶಿ ರಾಜೀನಾಮೆ ನೀಡಲಿ: ಬಿಜೆಪಿ ಆಗ್ರಹ
ಸೋಮವಾರಪೇಟೆ:ಕರ್ನಾಟಕ ಲೋಕಾಸೇವಾ ಆಯೋಗ(ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಠಾಚಾರ, ಪಶುವೈದ್ಯರ ನೇಮಕಾತಿಯಲ್ಲಿ 1.50 ಕೋಟಿ ರೂ.ಗಳ ಲಂಚ ಪಡೆದಿರುವ ಬಗ್ಗೆ ಪ್ರಾಧಿಕಾರದ ಕೆಲ ಪದಾಧಿಕಾರಿಗಳ ಮೇಲಿರುವ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಣ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ಕೂಡಲೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ.ಅಭಿಮನ್ಯು ಕುಮಾರ್ ಆಗ್ರಹಿಸಿದ್ದಾರೆ.
ನೀಟ್ ಅಕ್ರಮ ಮತ್ತು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರಧಾನ ಮಂತ್ರಿಗಳ ವಸತಿಗೃಹದ ಮುಂದೆ ಹೋರಾಟ ಮಾಡಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು. ವಿದ್ಯಾರ್ಥಿಗಳ ಹಿತರಕ್ಷಣೆಗೊಸ್ಕರ ನೈತಿಕ ಹೊಣೆಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ.
ನೈತಿಕತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಕರ್ನಾಟಕದ ಮುಖ್ಯಮಂತ್ರಿಗಳ ರಾಜೀನಾಮೆ ಪಡೆದು ಬದ್ಧತೆ ಪ್ರದರ್ಶಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನೀಟ್ ಅಕ್ರಮದ ಹೆಸರಿನಲ್ಲಿ ದೇಶದ ಹೊರಗಿನ ಮತ್ತು ಒಳಗಿನ ದ್ರೋಹಿಗಳು ದೆಹಲಿಯಲ್ಲಿ ದಾಂಧಲೆ ಮಾಡಿಸಿದ್ದಾರೆ. ಕೇಂದ್ರ ಸಚಿವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಚೀನಾ ಮತ್ತು ಪಾಕಿಸ್ಥಾನದಲ್ಲಿ ಸಂಭ್ರಮಾಚರಣೆ ನಡೆದಿದೆ. ಇದರಿಂದಲೇ ಗೊತ್ತಾಗುತ್ತದೆ. ದೆಹಲಿಯ ಜಂತರ್‌ಮಂತರ್ ನಲ್ಲಿ ನಡೆದ ಪ್ರತಿಭಟನೆಯ ಉದ್ದೇಶ ಎಂತಹದು ಎಂಬುದು ಎಂದು ಟೀಕಿಸಿದರು.
ಬಹುತೇಕ ಬಡವರ, ನಿರ್ಗತಿಕರ, ರೈತರ, ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲವೇತನ ವನ್ನು ಕಳೆದ ನಾಲ್ಕೈದು ತಿಂಗಳಿನಿಂದ ತಡೆಹಿಡಿಯಲಾಗಿದೆ. ಬಡವರ ಬದುಕುವ ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ. ಜಾತಿ ಧೃಡೀಕರಣ ಪತ್ರವನ್ನು ಪಡೆದುಕೊಳ್ಳಲು ಸರ್ಕಾರ ಮಾಡಿರುವ ಮಾರ್ಗಸೂಚಿ ಸಂವಿಧಾನಬಾಹಿರವಾಗಿದೆ ಎಂದು ದೂರಿದರು. ವೃದ್ಧಪ್ಯಾವೇತನವನ್ನೇ ನಂಬಿ ಬದುಕುತ್ತಿರುವ ವೃದ್ಧರಿಗೆ ಅನ್ಯಾಯ ಮಾಡಿದರೆ ಅವರ ಶಾಪ ಸರ್ಕಾರ ನಡೆಸುವವರಿಗೆ ತಟ್ಟಲಿದೆ ಎಂದು ಭವಿಷ್ಯ ನುಡಿದರು.
ಕೂಡಲೆ ಯಾವುದೇ ಷರತ್ತಿಲ್ಲದೆ ಮಾಸಿಕ ವೇತನಗಳನ್ನು ಬಿಡುಗಡೆಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಕಬ್ಬಿಣ ಸೇತುವೆ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಪರ್ಯಾಯ ರಸ್ತೆಯೂ ಗುಂಡಿಮಯವಾಗಿದೆ.
ಟಿಂಬರ್ ಲಾರಿಗಳು, ಕಲ್ಲುಗಳನ್ನು ತುಂಬಿದ ಲಾರಿಗಳು ಐಗೂರು ಗ್ರಾಮದೊಳಗಿನ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಗ್ರಾಮದಲ್ಲಿ ಸೇತುವೆಯೂ ಕುಸಿಯುವ ಹಂತದಲ್ಲಿದೆ. ಆ ಸೇತುವೆ ಕುಸಿದರೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ದೊಡ್ಡಮಟ್ಟದ ತೊಂದರೆಯಾಗಲಿದೆ. ಪರ್ಯಾಯ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಕೂಡಲೇ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್‌ಗೌಡ ಮಾತನಾಡಿ, ವಿರಾಜಪೇಟೆ ತಾಲೂಕಿನ ಮಾಲ್ದಾರೆ ಶ್ರೀ ಸಿದ್ದೇಶ್ವರ ದೇವಾಲಯದ ಪಕ್ಕದಲ್ಲಿ ಕೆಲವರು ರಾತ್ರೋರಾತ್ರಿ ಗೋರಿ ನಿರ್ಮಿಸಿದ್ದಾರೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಸೋಮೇಶ್ ಮಾತನಾಡಿ, ಸೋಮವಾರಪೇಟೆ ಪಟ್ಟಣದಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ, ರೋಗಿಗಳು ಪರದಾಡುತ್ತಿದ್ದಾರೆ. ಮೂಳೆ ಡಾಕ್ಟರ್ ಇಷ್ಟ ಬಂದಾಗ ರ‍್ತಾರೆ ಹೋಗ್ತಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ರಾಜ್ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
