ಕುಶಾಲನಗರದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ
ಕುಶಾಲನಗರ, ಜುಲೈ 26: 'ಕಾರ್ಗಿಲ್ ವಿಜಯೋತ್ಸವವು ಭಾರತೀಯ ಸೈನಿಕರ ಸಾಹಸದ ಪ್ರತೀಕ’ ವಾಗಿದೆ. ನಮ್ಮ ಸೈನಿಕರು ನಮ್ಮ ಹೆಮ್ಮೆ. ಶತ್ರುರಾಷ್ಟ್ರವನ್ನು ಮಣಿಸಿ ಭಾರತಾಂಬೆಗೆ ಗೆಲುವಿನ ಉಡುಗೊರೆ ನೀಡಿದ ವೀರ ಯೋಧರಿಗೆ ನಾವು ಶತ ಶತ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಭಾನುವಾರ ಇಲ್ಲಿ ಹೇಳಿದರು.
ಕುಶಾಲನಗರ ಮಾಜಿ ಸೈನಿಕರ ಸಂಘ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಸಂಘದ ಮುಳ್ಳುಸೋಗೆ ಕೆದಂಬಾಡಿ ಸಣ್ಣಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ 27 ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕಾಗಿ ಭಾರತೀಯರಾದ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು. ಅದರಲ್ಲೂ ದೇಶದ ಗಡಿ ರಕ್ಷಣೆಗಾಗಿ ತಮ್ಮ ಜೀವದ ಹಂಗನ್ನು ತೊರೆದು ಯುದ್ಧದಲ್ಲಿ ವೀರ ಮರಣ ಹೊಂದಿದ್ದ ವೀರಯೋಧರ ಶೌರ್ಯ, ಸಾಹಸವನ್ನು ನಾವು ಸ್ಮರಿಸಬೇಕು ಎಂದರು. ವೀರ ಪರಂಪರೆಯ ಶೌರ್ಯ ಮತ್ತು ಪರಾಕ್ರಮದ ಯೋಧರ ಸಾಹಸಮಯ ಯುದ್ಧ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರದ ರಕ್ಷಣೆಗೆ ಶ್ರಮಿಸಿದ ಸೈನಿಕರನ್ನು ಗೌರವಿಸುವ ಮೂಲಕ ಭಾರತ ದೇಶವನ್ನು ಗೌರವಿಸಬೇಕಿದೆ. ನಾವುಗಳು ಇಂತಹ ಸಂದರ್ಭದಲ್ಲಿ ಯೋಧರ ಜತೆ ಸೇರಿ ಅವರ ಸೇನಾ ಅನುಭವ ಪಡೆಯುವುದೇ ನಮಗೆ ಹೆಮ್ಮೆ ತಂದಿದೆ ಎಂದು ಶಶಿಧರ್ ಹೇಳಿದರು.
ಯುವ ಜನತೆಯಲ್ಲಿ ದೇಶ ಪ್ರೇಮ ಬಿತ್ತುವ ಕೆಲಸ ಬಾಲ್ಯದಿಂದಲೇ ಬೆಳೆಸುವ ಮೂಲಕ ಅವರಲ್ಲಿ ನನ್ನ ದೇಶ, ನಮ್ಮ ಹೊಣೆ ಎಂಬ ರಾಷ್ಟ್ರಾಭಿಮಾನ ಬೆಳೆಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಎಸ್.ಆರ್.ಮಾದಪ್ಪ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ದೇಶರಕ್ಷಣೆಗೆ ಜೀವವನ್ನೇ ಅರ್ಪಿಸಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ವೀರ ಯೋಧರ ಸೇವೆಯು ಇಂದಿನ ಯುವ ಜನಾಂಗಕ್ಕೆ ಮಾದರಿಯಾದುದು ಎಂದರು.
ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಇಂತಹ ವಿಜಯೋತ್ಸವವು ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮ ಮತ್ತು ಸಮಯಪ್ರಜ್ಞೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇದರಿಂದ ಯುವ ಪೀಳಿಗೆಯು ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರ ರಕ್ಷಣೆಯಲ್ಲಿ ತೊಡಗಬೇಕು ಎಂದರು.
ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್, ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು.ರಂಜಿತ್, ಜಿಲ್ಲಾ ಸಹಾಯಕ ಆಯುಕ್ತರಾದ ಸಿ.ಎಂ.ಸುಲೋಚನಾ( ಗೈಡ್ಸ್ ), ಕೆ.ಬಿ.ಗಣೇಶ್( ಸ್ಕೌಟ್ಸ್ ), ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಎಸ್.ತಮ್ಮಯ್ಯ, ಕಾರ್ಯದರ್ಶಿ ಎಂ.ಎಸ್.ಗಣೇಶ್, ಸಹ ಕಾರ್ಯದರ್ಶಿ ಇಂದಿರಾ ಮುತ್ತಣ್ಣ, ಖಜಾಂಚಿ ಎನ್.ಎಸ್. ನರೇಶ್ ಕುಮಾರ್, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಎನ್.ಎಸ್.ಕರುಂಬಯ್ಯ, ನಿವೃತ್ತ ಶಿಕ್ಷಕರಾದ ಡಿ.ವಿ.ಗಣೇಶ್, ಬಿ.ರಾಧಮ್ಮ , ಇದ್ದರು. ಸಂಘದ ಕಾರ್ಯದರ್ಶಿ ಲ್ಯಾನ್ಸ್ ನಾಯಕ್ ಎನ್.ಎಸ್.ಕರುಂಬಯ್ಯ ಸ್ವಾಗತಿಸಿದರು. ಟಿ.ಜಿ.ಪ್ರೇಮಕುಮಾರ್ ವಂದಿಸಿದರು.ಗೈಡ್ ಶಿಕ್ಷಕಿ ಕೆ.ಕೆ.ಗಾಯತ್ರಿ ನಿರ್ವಹಿಸಿದರು. ಹವಾಲ್ದಾರ್ ತಮ್ಮಯ್ಯ , ದೇಶಭಕ್ತಿ ಹಾಡಿ ರಾಷ್ಟ್ರಪ್ರೇಮ ಮೆರೆದರು.
ಮಾಜಿ ಯೋಧರಿಗೆ ಸನ್ಮಾನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 10 ಮಂದಿ ನಿವೃತ್ತ ಮೇಜರ್/ ಹವಾಲ್ದಾರ್ ಗಳನ್ನು ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
