ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೈರಂಬಾಡದ ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್‌ನಲ್ಲಿ 13ನೇ ಕೊಡವ ಪುಸ್ತಕ ಪತ್ತಾಯ
ಮಡಿಕೇರಿ: ಸಮಾಜದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಬದಲಾವಣೆಗಳು ಕೊಡವಾಮೆಯನ್ನು ಲೀನಗೊಳಿಸುವುದರ ವಿರುದ್ಧ ಕೊಡವ ಹಾಗೂ ಕೊಡವ ಭಾಷಿಕರ ಸಂಘಟಿತವಾದ ನಡೆಯಿಂದ ಕೊಡವಾಮೆಯನ್ನು ಉಳಿಸಲು ಸಾಧ್ಯವೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಬೈರಂಬಾಡದ ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್‌ನಲ್ಲಿ ನಡೆದ 13ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಚಯ್ಯ, ಜಾಗತಿಕವಾದ ಬದಲಾವಣೆಯ ಇಂದಿನ ದಿನಮಾನಸದಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಪಾರಂಪರ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯವು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಂಘಟಿತರಾಗಿ ಮುನ್ನಡೆಯಬೇಕಿದೆ ಎಂದರು. ಕೊಡವಾಮೆಯನ್ನು ರಕ್ಷಿಸುವ ಜವಾಬ್ದಾರಿಯು ಕೇವಲ ಸಂಘ-ಸಂಸ್ಥೆ, ಸಮಾಜಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಒತ್ತಿ ಹೇಳಿದರು.
ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜೀವಂತಿಕೆಯಿಂದಷ್ಟೆ ಜನಾಂಗವನ್ನು ಗುರುತಿಸಿಕೊಳ್ಳಲು ಸಾಧ್ಯವಿದ್ದು ಇನ್ನುಳಿದಂತೆ ಎಲ್ಲವೂ ವೈಯಕ್ತಿಕವಾದದ್ದು ಎಂದರು.
ಕ್ಲಬ್ ಸಂಸ್ಕೃತಿಯಿಂದ ಪುಸ್ತಕ ಸಂಸ್ಕೃತಿಯೆಡೆಗೆ ಪ್ರತಿಯೊಬ್ಬರೂ ಮುಖಮಾಡಿದಾಗ ಮಾತ್ರ ಅನಾದಿಕಾಲದಿಂದ ಬಳುವಳಿಯಾಗಿ ಬಂದಿರುವ ಬಾಳೋಪಾಟ್, ಪುತ್ತರಿಪಾಟ್, ಮಂಗಲಪಾಟ್‌ನಂತಹ ಜನಪದ ಹಾಡುಗಳಿಗೆ ಮತ್ತಷ್ಟು ಜೀವ ತುಂಬಿಸಿದಂತಾಗುವುದು. ಪ್ರತೀಯೊಂದು ಸಂಘ-ಸಂಸ್ಥೆ, ಸಮಾಜ, ಕ್ಲಬ್, ಅಸೋಸಿಯೇಶನ್‌ಗಳು ಕೊಡವ ಪದ್ಧತಿ, ಸಂಸ್ಕೃತಿಯನ್ನು ಕಲಿಸುವ ಕೇಂದ್ರಗಳಾಗಬೇಕೆಂಬ ಉದ್ದೇಶದಿಂದ ಕೊಡವ ಪುಸ್ತಕ ಪತ್ತಾಯದಂತಹ ಯೋಜನೆಯನ್ನು ಹೊರತಂದಿರುವುದಾಗಿ ಹೇಳಿದರು.
ಇಂತಹ ಕೇಂದ್ರಗಳಲ್ಲಿ ತಿಳಿದವರು ತಿಳಿದಿಲ್ಲದವರಿಗೆ “ಅರಿಯವನೇ ಪೆರಿಯಂವ” ಎಂಬಂತೆ ಕೊಡವ ಪಾಟ್, ಪಡಿಪು, ಪದ್ಧತಿಗಳನ್ನು ಕಲಿಸುವಂತಾಗಲಿ. ಹಾಲುಗುಂದ ಫಾರ್ಮರ್ಸ್ ಫ್ಯಾಮಿಲಿ ಕ್ಲಬ್ ಅಧ್ಯಕ್ಷರಾಗಿರುವ ಪಂದಿಕಂಡ ದಿನೇಶ್ ಕುಶ ಮುಂದಾಳತ್ವದಲ್ಲಿ ನಡೆಯುತ್ತಿರುವ ಕೇಂದ್ರವು ಕೊಡವ ಮೂಲನಿವಾಸಿಗರಿಗೆ ಸೇರಿರುವ ಸಂಸ್ಥೆಯಾಗಿದ್ದು ಇಂತಹವರ ನಾಯಕತ್ವವನ್ನು ಕೊಡವ ಸಂಸ್ಕೃತಿಯ ಬೆಳವಣಿಗೆಯ ದಿಸೆಯಲ್ಲಿ ಬೆಂಬಲಿಸುವಂತಾಗಬೇಕು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಪಂದಿಕಂಡ ದಿನೇಶ್ ಕುಶ, ಹಾಲುಗುಂದ ಗ್ರಾಮವು ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಇಲ್ಲಿ ಹಲವು ಕೊಡವ ಭಾಷಿಕರು ಅನ್ಯೋನ್ಯತೆಯಿಂದ ಜೀವಿಸುತ್ತಿದ್ದು ಎಲ್ಲರ ಅನುಕೂಲ ಹಾಗೂ ಕಷ್ಟ-ಸುಖದಲ್ಲಿ ಪಾಲ್ಗೊಳ್ಳುವಂತಾಗಲು ಫ್ಯಾಮಿಲಿ ಕ್ಲಬ್ ಸ್ಥಾಪಿಸಲಾಗಿದ್ದು ಸುಮಾರು 90 ಸಂಸಾರಗಳು ಕ್ಲಬ್‌ನ ಸದಸ್ಯರಾಗಿರುತ್ತಾರೆ. ಹಾಲುಗುಂದದಲ್ಲಿ ಒಟ್ಟು ಏಳು ದೇವತೆಗಳು ಅನಾದಿಕಾಲದಿಂದಲೇ ನೆಲೆ ನಿಂತಿದ್ದು ಗ್ರಾಮದ ಸಮಸ್ತ ಕುಟುಂಬದವರ ಸಹಯೋಗದಿಂದ ಹಬ್ಬಾಚರಣೆಗಳು ನಡೆಯುತ್ತಿದೆ. ಅದರಂತೆ ಕ್ಲಬ್ ವತಿಯಿಂದ ಕೊಡವ ಸಂಸ್ಕೃತಿಯ ಏಳಿಗೆಗೆ ದುಡಿಯುತ್ತಿದ್ದು, ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಯಾದ ಪುಸ್ತಕ ಪತ್ತಾಯವನ್ನು ಸ್ಥಾಪಿಸುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯೆನಿಸಿದೆ. ಈ ಪತ್ತಾಯದ ಪ್ರಯೋಜನವನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳುವಂತಾಗಬೇಕೆಂದು ಮನವಿ ಮಾಡಿದರು.
ಪುಸ್ತಕ ಪತ್ತಾಯನ್ನು ಅನಾವರಣಗೊಳಿಸಿ ಮಾತನಾಡಿದ ಊರು ತಕ್ಕರು ಹಾಗೂ ಹಿರಿಯರಾದ ಮೇಕೇರಿರ ರಘು ನಾಣಯ್ಯರವರು, ಹಾಲುಗುಂದ ಗ್ರಾಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪುಸ್ತಕ ಪತ್ತಾಯ ತೆರೆದಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಇದರಿಂದ ಗ್ರಾಮದಲ್ಲಿ ಕೊಡವ ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಪರಿಜ್ಞಾನ ಮೊಳಗಿ, ಮುಂದಿನ ದಿನಗಳಲ್ಲಿ ಕೊಡವ ಪದ್ಧತಿ, ಸಂಸ್ಕೃತಿಯ ಬೆಳವಣಿಗೆಗೆ ಮಾರ್ಗದರ್ಶನ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ಮತ್ತಷ್ಟು ಪ್ರಯೋಜನಕಾರಿ ಕಾರ್ಯಗಳು ನಡೆಯುವಂತಾಗಲಿ ಎಂದು ಆಶಿಸಿದರು.
ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಜ್ಜಿನಿಕಂಡ ಮಹೇಶ್ ನಾಚಯ್ಯರವರ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಜನಮೆಚ್ಚುಗೆಗೆ ಪಾತ್ರವಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ಜಿಲ್ಲೆಯ ವಿವಿದೆಡೆಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಸ್ಮರಿಸಿಕೊಳ್ಳುವಂತಿದೆ. ಅಕಾಡೆಮಿಯ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದರು.
ಈ ವೇಳೆ ಅಧ್ಯಕ್ಷ ಮಹೇಶ್ ನಾಚಯ್ಯ ಫ್ಯಾಮಿಲಿ ಕ್ಲಬ್ ಅಧ್ಯಕ್ಷ ದಿನೇಶ್ ಕುಶರಿಗೆ ಅಕಾಡೆಮಿ ವತಿಯಿಂದ ಪುಸ್ತಕ ಪತ್ತಾಯದ ನೋಂದಣಿ ಪತ್ರವನು ಹಸ್ತಾಂತರಿಸಿದರು. ಈ ಪ್ರಯುಕ್ತ ಕ್ಲಬ್ ವತಿಯಿಂದ ಪುಸ್ತಕ ಪತ್ತಾಯ ನೋಂದಣಿ ಶುಲ್ಕವಾಗಿ ಹತ್ತು ಸಾವಿರ ರೂಪಾಯಿಗಳ ಚೆಕ್ಕನ್ನು ಅಕಾಡೆಮಿ ಹೆಸರಿಗೆ ನೀಡಿದರು. ಕಾರ್ಯಕ್ರಮವನ್ನು ಪಂದಿಕಂಡ ಪ್ರಿಯಾ ಸೋಮಣ್ಣ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ ಸ್ವಾಗತಿಸಿದರು.
ಮಚ್ಚೇಟಿರ ಅರುಣ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್ ಹಾಗೂ ಫ್ಯಾಮಿಲಿ ಕ್ಲಬ್ ಕಾರ್ಯಾಧ್ಯಕ್ಷ ಚೆಯ್ಯಂಡ ಭರತ್, ಉಪಾಧ್ಯಕ್ಷ ಅಪ್ಪಾರಂಡ ಸುಧೀರ್, ಕಾರ್ಯದರ್ಶಿ ಪೊಟ್ಟಂಡ ನಾಣಯ್ಯ ಹಾಗೂ ನಿರ್ದೇಶಕರು, ಸದಸ್ಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
