National News

ಕೇರಳ | ಮುನ್ನಾರ್‌ನಲ್ಲಿ ‘ಸೋನಿಯಾ ಗಾಂಧಿ’ ಬಿಜೆಪಿ ಅಭ್ಯರ್ಥಿ!

admincoorgdaily

Photo credit:VB

ತಿರುವನಂತಪುರಂ: ಕೇರಳದ ಮುನ್ನಾರ್‌ ನಲ್ಲತನ್ನಿ ವಾರ್ಡ್‌ (ವಾರ್ಡ್ 16) ಈ ಬಾರಿ ಪಂಚಾಯತಿ ಚುನಾವಣೆಯ ಹಾಟ್‌ಸ್ಪಾಟ್‌ ಆಗಿದೆ. ಬಿಜೆಪಿ ಇಲ್ಲಿ ‘ಸೋನಿಯಾ ಗಾಂಧಿ’ ಎಂಬ ಹೆಸರಿನ ಮಹಿಳೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ! ಹೆಸರು ಕೇಳುತ್ತಿದ್ದಂತೆಯೇ ರಾಜಕೀಯ ವಲಯಗಳಲ್ಲಿ ಚರ್ಚೆ ಚುರುಕುಗೊಂಡಿದೆ.

34 ವರ್ಷದ ಸೋನಿಯಾ ಗಾಂಧಿ ಕಲ್ಲರ್‌ನ ನಿವಾಸಿ. ಅವರಿಗೆ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರೊಂದಿಗೆ ಯಾವುದೇ ಸಂಬಂಧವಿಲ್ಲ. ಕೇವಲ ಹೆಸರು ಒಂದೇ; ರಾಜಕೀಯ ಮಾತ್ರ ಭಿನ್ನ.

ಹೆಸರು ಹೇಗೆ ಬಂದಿತು?

ಸ್ಥಳೀಯ ಕೂಲಿ ಕಾರ್ಮಿಕ ಹಾಗೂ ಮಾಜಿ ಕಾಂಗ್ರೆಸ್‌ ನಾಯಕ ದಿ. ದುರೆ ರಾಜ್ ಅವರಿಗೆ ಹೆಣ್ಣುಮಗು ಜನಿಸಿದಾಗ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ಮೇಲಿದ್ದ ಗೌರವದಿಂದ ಆ ಮಗುವಿಗೆ ‘ಸೋನಿಯಾ ಗಾಂಧಿ’ ಎಂದು ಹೆಸರಿಟ್ಟಿದ್ದರು.ಅದೇ ಹೆಸರಿನ ಆಕೆ ಇದೀಗ ಬಿಜೆಪಿ ಪರವಾಗಿ ಚುನಾವಣೆಗೆ ನಿಂತಿರುವುದು ಕುತೂಹಲ ಹೆಚ್ಚಿಸಿದೆ.

ಬಿಜೆಪಿಯ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಸುಭಾಶ್‌ ಅವರನ್ನು ವಿವಾಹವಾದ ಬಳಿಕ ಸೋನಿಯಾ ಗಾಂಧಿ ರಾಜಕೀಯವಾಗಿ ಕಮಲಪಕ್ಷದತ್ತ ತಿರುಗಿದರು. ಸುಭಾಶ್‌ ಮುನ್ನಾರ್‌ ಮುಲಕ್ಕಾಡಿನಲ್ಲಿ ನಡೆದ ಉಪಚುನಾವಣೆಯಲ್ಲೂ ಸ್ಪರ್ಧಿಸಿದ್ದವರು. ಪತಿಯ ರಾಜಕೀಯ ಪಯಣಕ್ಕೆ ಜೊತೆಗೂಡಿ, ಈಗ ಸೋನಿಯಾ ಗಾಂಧಿಯೂ ಕಣಕ್ಕಿಳಿದಿದ್ದಾರೆ.

ಯಾರ ಎದುರು ಪೈಪೋಟಿ?

ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮಂಜುಳಾ ರಮೇಶ್ ಹಾಗೂ ಸಿಪಿಎಂನ ವಲಾರ್ಮತಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ‘ಸೋನಿಯಾ ಗಾಂಧಿ’ ಎಂಬ ಹೆಸರಿನ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ಪ್ರತಿಸ್ಪರ್ಧಿಯ ವಿರುದ್ಧವೇ ನಿಂತಿರುವುದು ಸ್ಥಳೀಯರಲ್ಲೂ, ಪಕ್ಷಗಳಲ್ಲೂ ಕುತೂಹಲ ಮೂಡಿಸಿದೆ.

ಮುನ್ನಾರ್‌ ಗುಡ್ಡಗಾಡಿನ ನಲ್ಲತನ್ನಿ ವಾರ್ಡ್‌—ಈ ಬಾರಿ ಅಭಿವೃದ್ಧಿ, ಸಮಸ್ಯೆಗಳಿಗಿಂತಲೂ ಹೆಸರು–ಹೆಸರಿನ ರಾಜಕೀಯ ಕಣಕ್ಕೇ ಹೆಚ್ಚು ಗಮನ ಸೆಳೆಯುತ್ತಿದೆ.