CRIME

ಬಂಡೀಪುರದಲ್ಲಿ ಆಭರಣ ತಯಾರಕನಿಂದ ಕೆಜಿಗಟ್ಟಲೆ ಚಿನ್ನ ದರೋಡೆ! | ಚಾಮರಾಜನಗರದಲ್ಲಿ ಕೇರಳದ ಗ್ಯಾಂಗ್ ಮತ್ತೆ ಸಕ್ರಿಯ?

admincoorgdaily

ಚಾಮರಾಜನಗರ, ನ.23: ಗಡಿಜಿಲ್ಲೆ ಚಾಮರಾಜನಗರದಲ್ಲಿ ನಾಟೋರಿಯಸ್ ಕೇರಳ ಗ್ಯಾಂಗ್ ಮತ್ತೆ ಕೈಚಳಕ ತೋರಿಸಿರುವ ಶಂಕೆಗೆ ಕಾರಣವಾದ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್‌ಪೋಸ್ಟ್ ಸಮೀಪ ನ.20ರ ರಾತ್ರಿ ಆಭರಣ ತಯಾರಕನ ಕಾರನ್ನು ಅಡ್ಡಗಟ್ಟಿ 1.3 ಕೆಜಿಗಿಂತ ಹೆಚ್ಚು ಚಿನ್ನ ದೋಚಿರುವ ಘಟನೆ ಶನಿವಾರ ಅಧಿಕೃತವಾಗಿ ದೂರು ದಾಖಲಾಗುತ್ತಿದ್ದಂತೆ ಬಹಿರಂಗವಾಗಿದೆ.

ಕ್ಯಾಲಿಕೇಟ್ ಮೂಲದ ವಿನು ಎಂಬ ಆಭರಣ ತಯಾರಕ, ಚಾಲಕ ಸಮೀರ್ ಜೊತೆಯಲ್ಲಿ ಮಂಡ್ಯದ ರಾಜೇಶ್ ಜ್ಯುವೆಲರ್ಸ್‌ನಿಂದ 800 ಗ್ರಾಂ 24 ಕ್ಯಾರೆಟ್ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಪಡೆದು ಬಂಡೀಪುರ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ಎರಡು ಇನ್ನೋವಾ ಮತ್ತು ಒಂದು ಇಟಿಯೋಸ್ ಕಾರಿನಲ್ಲಿ ಬಂದ 10-12 ಮಂದಿ ದರೋಡೆಕೋರರು ಕಾರನ್ನು ತಡೆದಿದ್ದಾರೆ. ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳವನ್ನು ಟಾರ್ಗೆಟ್ ಮಾಡಿಕೊಂಡ ಆರೋಪಿಗಳು, ಕಾರು ಸಮೇತ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆಂದು ವಿನು ಪೊಲೀಸರಿಗೆ ತಿಳಿಸಿದ್ದಾರೆ.

ಜನನಿಬಿಡ ವಿರಾಜಪೇಟೆ ರಸ್ತೆಯಲ್ಲೇ ಕಾರು ನಿಲ್ಲಿಸಿ ದರೋಡೆ ನಡೆಸಿರುವುದು, ಪೂರ್ವ ನಿಯೋಜಿತ ಕೃತ್ಯ ಎಂಬ ಶಂಕೆಗೆ ಕಾರಣವಾಗಿದೆ. ದೂರು ದಾಖಲಾದ ಬಳಿಕ ಜಿಲ್ಲೆಯ ಎಸ್ಪಿ ಡಾ. ಬಿ.ಟಿ. ಕವಿತಾ ಮೂಲೆಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಆಭರಣ ತಯಾರಕ ನೀಡಿದ ದಾಖಲೆಗಳು ಮತ್ತು ಚಿನ್ನ ಸಾಗಾಟ ಮಾರ್ಗದ ವಿವರಗಳನ್ನು ಪರಿಶೀಲಿಸಿದ್ದಾರೆ.

ಹಿಂದಿನ ದರೋಡೆ ಪ್ರಕರಣಗಳ ಮಾದರಿ ಗಮನಿಸಿದಾಗ ಕೇರಳ ಮೂಲದ ಗ್ಯಾಂಗ್ ಕೈವಾಡವೇ ಇರಬಹುದೆಂಬ ಶಂಕೆ ಹೆಚ್ಚಾಗಿದೆ. “ತಾಂತ್ರಿಕ ಮತ್ತು ಗುಪ್ತಚರ ಮಾಹಿತಿಗಳ ಆಧಾರದಲ್ಲಿ ತನಿಖೆ ವೇಗಗೊಳಿಸಲಾಗಿದೆ,” ಎಂದು ಎಸ್ಪಿ ತಿಳಿಸಿದ್ದಾರೆ.