ಮೂರ್ನಾಡು ಗ್ರಾಮದಲ್ಲಿ ಜ್ಞಾನದ ಭಂಡಾರ ಪುಸ್ತಕ ಪತ್ತಾಯ ಕಾರ್ಯಕ್ರಮ

Mar 7, 2026 - 17:34
 0  114
ಮೂರ್ನಾಡು ಗ್ರಾಮದಲ್ಲಿ ಜ್ಞಾನದ ಭಂಡಾರ ಪುಸ್ತಕ ಪತ್ತಾಯ ಕಾರ್ಯಕ್ರಮ

ಮಡಿಕೇರಿ ಮಾ.07:-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ 4ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಮೂರ್ನಾಡು ಕೊಡವ ಸಮಾಜದಲ್ಲಿ ಅರ್ಥಪೂರ್ಣವಾಗಿ ನೆರೆವೇರಿತು. 

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸಿ.ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೊಡವ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಮಹೇಶ್ ನಾಚಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಈ ವಿನೂತನ ಯೋಜನೆಯು ಕೇವಲ ಕೊಡವ ಭಾಷೆಯ ಪುಸ್ತಕಗಳ ದಾಸ್ತಾನು ಮಾತ್ರ ಆಗಿರದೆ, ಕೊಡಗಿನ ಬಗ್ಗೆ ಬರೆದಿರುವ ಇನ್ನಿತರ ಭಾಷೆಗಳ ಪುಸ್ತಕಗಳನ್ನು ಪತ್ತಾಯದಲ್ಲಿ ಶೇಖರಿಸಿ ಜತನ ಮಾಡಿ, ಅಧ್ಯಯನಕ್ಕೆ ಅವಕಾಶವಿದೆ ಎಂದರು. 

ಕೊಡವ ಪುಸ್ತಕ ಪತ್ತಾಯವು ಕೊಡಗಿನ ಸಮಗ್ರ ಮಾಹಿತಿ ನೀಡುವ ಭಂಡಾರವಾಗಿರಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಸಂಶೋಧನೆ, ಅಧ್ಯಯನ ನಡೆಸುವವರಿಗೆ ಕೊಡವ ಪುಸ್ತಕ ಪತ್ತಾಯವು ಒಂದು ವಿಶ್ವವಿದ್ಯಾನಿಲಯ ಮಾದರಿಯಲ್ಲಿ ಆಗಬೇಕು ಎಂಬುದು ಆಶಯವಾಗಿದೆ. ಇದು ಕೇವಲ ಪುಸ್ತಕಗಳ ಸಂಗ್ರಹವಾಗಿರದೆ ಜ್ಞಾನದ ಪತ್ತಾಯವಾಗಬೇಕು ಎಂದರು. 

ಪುಸ್ತಕ ಪತ್ತಾಯವನ್ನು ಕೊಡವ ಸಮಾಜ ಅಧ್ಯಕ್ಷ ತೇಲಪಂಡ .ಸಿ.ಸುಬ್ಬಯ್ಯ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಪಳಂಗಂಡ ವಾಣಿ ತಮ್ಮಯ್ಯ ಸೇರಿ ಉದ್ಘಾಟಿಸಿದರು. 

ವೇಣು ಅಪ್ಪಣ್ಣ ಮಾತನಾಡಿ, ಕೊಡವ ಅಕಾಡೆಮಿಯ ಈ ಒಂದು ಯೋಜನೆ ಅತ್ಯುತ್ತಮವಾಗಿದ್ದು, ಕೊಡಗಿನ ಮನೆ ಮನೆಗಳಿಗೆ ಪುಸ್ತಕ ಭಂಡಾರವನ್ನು ಸ್ಥಾಪಿಸುವ ಮೂಲಕ ಪುಸ್ತಕ ಓದುವ ಅಭ್ಯಾಸ ಹುಟ್ಟಿಸುವಂತಾಗಿದೆ. ಆ ಮೂಲಕ ನಮ್ಮ ಹಿರಿಯರ ಪುಸ್ತಕಗಳನ್ನು ಜೀವಂತವಾಗಿರಿಸಲು ಅನುವು ಮಾಡಿ ಕೊಟ್ಟಂತಾಗುತ್ತದೆ ಎಂದು ಪ್ರಶಂಸಿಸಿದರು. 

ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ತಮ್ಮ ಮನೆಯಲ್ಲಿ ದೇಶಸುತ್ತಿನೋಡು, ಕೋಶ ಓದಿ ನೋಡು ಎಂದು ನಾಣ್ನುಡಿಯಂತೆ ಅಕಾಡೆಮಿಯು ಮನೆ ಮನೆಗಳಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸುವ ಹಾಗೂ ಆ ಮೂಲಕ ನಮ್ಮ ಚರಿತ್ರೆ, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಅವಕಾಶ ಮಾಡಿ ಕೊಡುತ್ತಿರುವುದು ಸಂಶೋದನೆ ವಿಚಾರ, ಕೊಡವ ಸಮಾಜದಲ್ಲಿ ಸ್ಥಾಪನೆ ಆಗಿರುವ ಪುಸ್ತಕ ಪತ್ತಾಯದಿಂದ ಸದಸ್ಯರು ಯಾರು ಬೇಕಾದರೂ ಪುಸ್ತಕಗಳನ್ನು, ಸಮಾಜದ ನಿಯಮಗಳಿಗೆ ತಕ್ಕಂತೆ ಕೊಂಡು ಓದುವ ಅವಕಾಶ ಕೊಡಲಾಗುವುದು ಎಂದರು.

ಸಮಾಜದ ಅಧ್ಯಕ್ಷರು ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ರೂ. 10 ಸಾವಿರಗಳನ್ನು ಅಕಾಡೆಮಿಗೆ ನೀಡಿದರು. ನೋಂದಣಿ ಪತ್ರವನ್ನು ವೇದಿಕೆಯಲ್ಲಿ ಸಮಾಜಕ್ಕೆ ಹಸ್ತಾಂತರಿಸಲಾಯಿತು.

ಅಕಾಡೆಮಿಯ ಸದಸ್ಯರಾದ ಕಂಬೆಯಂಡ ಡೀನಾ ಬೋಜಣ್ಣ, ಕುಡಿಯಡ ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ನಾಪಂಡ ಗಣೇಶ್, ನಾಯಂದಿರ ಶಿವಾಜಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅಕಾಡೆಮಿಯ ಸದಸ್ಯರಾದ ಕೊಂಡಿಜಮ್ಮನ ಬಾಲಕೃಷ್ಣ ಸರ್ವರನ್ನು ಬರಮಾಡಿಕೊಂಡರು. ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಸ್ವಾಗತಿಸಿದರು. ಚೋಯಮಾಡಂಡ ನವೀನ್ ಪ್ರಾರ್ಥಿಸಿದರು. ಬಾಲಕೃಷ್ಣ ವಂದಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0