ಕಸ್ತೂರಿ ರಂಗನ್ ವರದಿಯ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೊಡಗು ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ ಒತ್ತಾಯ
ವಿರಾಜಪೇಟೆ: ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದೆ. ಈ ವರದಿಯು ಮಲೆನಾಡು ಮತ್ತು ಕರಾವಳಿ ಭಾಗದ ರೈತರು ಹಾಗೂ ಜನಸಾಮಾನ್ಯರ ಬದುಕಿಗೆ ಮಾರಕವಾಗಿದೆ ಎಂದು ಆಪಾದಿಸಿ, ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕೊಡಗು ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಒತ್ತಾಯಿಸಿದೆ.
ಈ ಕುರಿತು ಮಾತನಾಡಿದ ಕೊಡಗು ಜಿಲ್ಲಾ ಸಿಪಿಐಎಂ ಪಕ್ಷದ ಕಾರ್ಯದರ್ಶಿ ಹೆಚ್.ಬಿ ರಮೇಶ್ ಅವರು, ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಅತಿ ಸೂಕ್ಷ÷್ಮ ಪ್ರದೇಶಗಳ ಹೆಸರಿನಲ್ಲಿ ರೈತರನ್ನು ಭೂಮಿಯ ಹಕ್ಕಿನಿಂದ ವಂಚಿಸಲಾಗುತ್ತಿದೆ. ಇದರಿಂದ ಜೀವನೋಪಾಯಕ್ಕೆ ಧಕ್ಕೆಯಾಗಲಿದ್ದು, ಕೃಷಿ ಮತ್ತು ಮೂಲಭೂತ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಕೇಂದ್ರ ಸರಕಾರವು ಕೂಡಲೇ ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು. ಪಶ್ಚಿಮ ಘಟ್ಟದ ಜನರ ಹಿತಾಸಕ್ತಿ ಕಾಪಾಡಲು ರಾಜ್ಯ ಸರಕಾರವು ಕೇಂದ್ರದ ಮೇಲೆ ಒತ್ತಡ ತರಬೇಕು. ಸ್ಥಳೀಯರ ಒಪ್ಪಿಗೆಯಿಲ್ಲದೆ ಯಾವುದೇ ಕಠಿಣ ನಿಯಮಗಳನ್ನು ಹೇರಬಾರದು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಡಾ. ಐ.ಆರ್ ದುರ್ಗಾಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರವು ಡಾ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಮುಂದಿನ 60 ದಿನಗಳೊಳಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶವನ್ನು ನಿಗದಿಪಡಿಸಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಕೊಡಗಿನ ನೂರಾರು ಗ್ರಾಮಗಳ ಗ್ರಾಮಸ್ಥರ ಜೀವನ ಅತಂತ್ರವಾಗಲಿದೆ. ಜಿಲ್ಲೆಯಲ್ಲಿ ಶೇ. 30ರಷ್ಟು ಜನರು ಪಶ್ಚಿಮ ಘಟ್ಟದ ಅರಣ್ಯ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ಜನಸಾಮಾನ್ಯರ ಉಸಿರುಗಟ್ಟಿಸುತ್ತಿವೆ. ಹೀಗಿರುವಲ್ಲಿ ಕೇಂದ್ರ ಸರಕಾರ ಜಿಲ್ಲೆಯ ಬಹುಪಾಲು ಜನವಸತಿ ಪ್ರದೇಶಗಳನ್ನು ಪರಿಸರವಾಗಿ ಅತ್ಯಂತ ಸೂಕ್ಷ÷್ಮ ಪ್ರದೇಶವೆಂದು ಘೋಷಿಸಿ, ಅಲ್ಲಿ ವಿವಿಧ ನಿರ್ಬಂಧ ಹೇರಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ತನ್ನ 7ನೇ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು. ಈ ಜನವಿರೋಧಿ ಅಧಿಸೂಚನೆಗೆ ರಾಜ್ಯ ಸರಕಾರವು ತನ್ನ ವಿರೋಧ ಸೂಚಿಸಬೇಕು ಹಾಗೂ ರಾಜ್ಯ ಸರಕಾರದಿಂದ ಜಿಲ್ಲೆಯ ಜನರ ಹಿತ ಕಾಯುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ. ಸಾಬು ಮಾತನಾಡಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ 2014 ರಲ್ಲಿ ಮೇ 26ರಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ಆ ಸರ್ಕಾರ ಮುಚ್ಚಳಿಕೆಯನ್ನು ಬರೆದು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಅದೇ ವರ್ಷ ಆಗಸ್ಟ್ 27 ರಂದು ಮಂಡಿಸಿ "ಹಾಗು ಡಾ. ಮಾಧವ ಗಾಡ್ಗೀಳ್ ಅಧ್ಯಕ್ಷತೆಯ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲವೆಂದೂ, ಡಾ. ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆಂದೂ"ತಿಳಿಸಿತು. ಹೀಗೆ ತಾನು ನ್ಯಾಯಾಲಯದಲ್ಲಿ ಒಪ್ಪಿರುವುದನ್ನು ಅನುಷ್ಠಾನಕ್ಕೆ ತರುವುದಕ್ಕೆ ಹೆಜ್ಜೆಗಳಾಗಿ ಅಧಿಸೂಚನೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತಲೇ ಬಂದಿದ್ದು ಆ ಸರಣಿಯಲ್ಲಿ ಈಗ ಐದನೇ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆಯ ಪ್ರಕಟಣೆಯಲ್ಲಿ ಆಕ್ಷೇಪಣೆಗಳಿಗೆ ಕೇಳಿರುವುದು ಕೇವಲ ಔಪಚಾರಿಕವಾಗಿದೆ. ಕಳುಹಿಸಿದ ಆಕ್ಷೇಪಗಳನ್ನು ಕೇಂದ್ರ ಸರಕಾರ ಅಂಗೀಕರಿಸುವುದಿಲ್ಲ ಎನ್ನುವುದು ಹಿಂದಿನ ಅನುಭವಗಳಾಗಿವೆ. ಈ ಹಿಂದೆ ಅಧಿಸೂಚನೆಗಳು ಪ್ರಕಟವಾದಾಗಲೂ ಸಾಕಷ್ಟು ಆಕ್ಷೇಪಣಾ ಪತ್ರಗಳನ್ನು ಕಳುಹಿಸಲಾಗಿತ್ತಾದರೂ ಅವುಗಳಿಗೆ ಯಾವ ಬೆಲೆಯೂ ಸಿಕ್ಕಿಲ್ಲ.
ಕರ್ನಾಟಕದಲ್ಲಿ ಈ ವರದಿಯ ಜಾರಿಗೆ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಜನವಸತಿ ಪ್ರದೇಶಗಳು, ತೋಟಗಾರಿಕೆ ಮತ್ತು ಸ್ಥಳೀಯರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಒಪ್ಪಿಗೆ ನೀಡಿಲ್ಲ. ಸ್ಥಳೀಯ ಜನರ ಹಿತರಕ್ಷಣೆಗಾಗಿ ಹಾಗೂ ಜನನಿಬಿಡ ಪ್ರದೇಶಗಳನ್ನು ಈ ವರದಿಯ ವ್ಯಾಪ್ತಿಯಿಂದ ಹೊರಗಿಡಲು ಒತ್ತಾಯಿಸಿ ಸಿಪಿಐಎಂ ಮತ್ತು ವಿವಿಧ ಸಂಘಟನೆಗಳು ಕರ್ನಾಟಕದಲ್ಲೂ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಕೊಡಗು ವ್ಯಾಪ್ತಿಯಲ್ಲಿ ಈ ಹಿಂದೆ ಸಂಸದರಾಗಿದ್ದ ಪ್ರತಾಪ್ ಸಿಂಹ ಹಾಗೂ ಪ್ರಸ್ತುತ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ವಿಷಯದಲ್ಲಿ ಜನರ ಪರವಾಗಿ ಸೂಕ್ತವಾಗಿ ಧ್ವನಿ ಎತ್ತಿಲ್ಲ ಮತ್ತು ಅವರಿಗೆ ವರದಿಯ ಗಂಭೀರತೆಯ ಬಗ್ಗೆ ಸೂಕ್ತ ತಿಳುವಳಿಕೆ ಇಲ್ಲ ಎಂದು ಆರೋಪಿಸಿದರು.
ವರದಿಯ ಯಥಾವತ್ ಜಾರಿಯಿಂದ ಜನನಿಬಿಡ ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ವಿನಾಯಿತಿ ನೀಡದಿದ್ದರೆ, ಎಲ್ಲಾ ಪಕ್ಷಗಳು ಹಾಗೂ ನಾಯಕರನ್ನು ಒಗ್ಗೂಡಿಸಿ ರಾಜಕೀಯಾತೀತವಾಗಿ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದರು.
ಈ ಸಂದರ್ಭ ಸಮಿತಿ ಸದಸ್ಯರಾದ ಪದ್ಮಿನಿ ಶ್ರೀಧರ್ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
