ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ
ವಿರಾಜಪೇಟೆ:ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ನಿಸ್ಸಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರತಿಷ್ಟಿತ ಮಹಾವೀರ ಚಕ್ರ ಪುರಸ್ಕೃತ ನಿವೃತ್ತ ಕರ್ನಲ್ ಪುಟ್ಟಿಚಂಡ ಗಣಪತಿ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ತ್ರಿವೇಣಿ ವಿದ್ಯಾಸಂಸ್ಥೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ, ಆಯ್ಕೆಯಾದ 132 ವಿದ್ಯಾರ್ಥಿಗಳಿಗೆ ಒಟ್ಟು 32 ಲಕ್ಷ ರೂಪಾಯಿ ಮೊತ್ತದ ಶೈಕ್ಷಣಿಕ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಮುಂದುವರಿದರೆ ಸಾಲದು, ದೇಶದ ರಕ್ಷಣೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. "ಸಾಧನೆ ಎಂಬುದು ಒಂದೇ ದಿನದಲ್ಲಿ ಸಿಗುವುದಿಲ್ಲ. ಲಕ್ಷ್ಯ ಸಾಧಿಸಲು ಈಗಿನಿಂದಲೇ ನಿರಂತರ ಅಭ್ಯಾಸ, ದೈಹಿಕ ದೃಢತೆ ಹಾಗೂ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗುವ ಕನಸು ಕಂಡು, ಸೇನೆಗೆ ಸೇರುವ ಮೂಲಕ ದೇಶಸೇವೆಗೆ ಮುಂದಾಗಬೇಕು ಕರೆ ನೀಡಿದರು.
ಕುಶಾಲನಗರದಲ್ಲಿ ಅಗ್ನಿವೀರ್ ತರಬೇತಿ ನೀಡುತ್ತಿರುವ ಅಮೆ ಜನಾರ್ಧನ ಮಾತನಾಡಿ, ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಂದಿನ ಯುವಜನತೆ ಶಿಕ್ಷಣದ ಜೊತೆಗೆ ಸೇನಾ ಕ್ಷೇತ್ರಕ್ಕೆ ಸೇರಲು ಹೆಚ್ಚಿನ ಆಸಕ್ತಿ ತೋರಿಸಬೇಕು. ಸಹಾಯಧನವನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪೂರ್ಣಗೊಳಿಸಬೇಕು. ಕೇವಲ ಅಂಕ ಗಳಿಸುವುದಷ್ಟೇ ಅಲ್ಲದೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮುಖ್ಯ ಎಂದರು.
ಶಿಕ್ಷಣ ತಜ್ಞ ಡಾ. ಮಂದಪAಡ ರಜನಿ ಚಂಗಪ್ಪ ಮಾತನಾಡಿ ಪೋಷಕರು ಯಾವ ರೀತಿಯಲ್ಲಿ ಮಕ್ಕಳಿಗೆ ಹಿತವಚನ ಹೇಳುವುದು ಮತ್ತು ಅವರೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು ಹೇಗೆ ಎಂದು ವಿವರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಮಾತನಾಡಿ, 2008ರಲ್ಲಿ ಪಂದ್ಯಂಡ ಸೂರಜ್ ಮಾಚಯ್ಯ, ಮಾರ್ಚಂಡ ಗಣೇಶ್ ಪೊನ್ನಪ್ಪ ಹಾಗೂ ಮಂದಪಂಡ ಸದಾ ಚಂಗಪ್ಪ ಅವರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಈ ಟ್ರಸ್ಟ್ ಪ್ರಾರಂಭಿಸಿದರು. 2010ರಲ್ಲಿ ಕ್ಯಾಪ್ಟನ್ ಪಟ್ಟಡ ಎಸ್. ಕಾರ್ಯಪ್ಪ ಅವರು ಸೇರ್ಪಡೆಯಾದ ನಂತರ, 2015-16ರಲ್ಲಿ ಟ್ರಸ್ಟ್ ಅಧಿಕೃತವಾಗಿ ನೋಂದಣಿಯಾಯಿತು. ಪ್ರಸ್ತುತ 7 ಜನ ಟ್ರಸ್ಟಿಗಳು ತಮ್ಮ ವೈಯುಕ್ತಿಕ ಹಣ ಮತ್ತು ದಾನಿಗಳ ಸಹಕಾರದಿಂದ ಟ್ರಸ್ಟ್ ಮುನ್ನಡೆಸುತ್ತಿದ್ದು, ಇದುವರೆಗೆ ಸುಮಾರು 2,500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಗಿದೆ ಎಂದರು.
ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಶೈಕ್ಷಣಿಕ ಶುಲ್ಕದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ವಿವಿಧ ತರಬೇತಿಗಳನ್ನು ಟ್ರಸ್ಟ್ ನೀಡುತ್ತಿದೆ. 2008ರಿಂದ ನಿರಂತರವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ 'ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್' ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ, ದಾನಿಗಳಿಂದ ಹಣ ಸಂಗ್ರಹಿಸಿ ಕಳೆದ 18 ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ನೆರವು ನೀಡುತ್ತಾ ಬಂದಿದೆ. ಈ ವರ್ಷ 132 ವಿದ್ಯಾರ್ಥಿಗಳಿಗೆ ಒಟ್ಟು 32 ಲಕ್ಷ ರೂಪಾಯಿ ವೆಚ್ಚದ ಶೈಕ್ಷಣಿಕ ಶುಲ್ಕವನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಖಜಾಂಚಿ ಕ್ಯಾಪ್ಟನ್ ಪಟ್ಟಡ ಎಸ್. ಕಾರ್ಯಪ್ಪ ಮಾತನಾಡಿ,"ಪೋಷಕರನ್ನು ಕಳೆದುಕೊಂಡ ಬಳಿಕ ಶಿಕ್ಷಣ ಮುಂದುವರಿಸಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಟ್ರಸ್ಟ್ ಆಸರೆಯಾಗಿ ನಿಲ್ಲುತ್ತದೆ. ಪದವಿ ಹಾಗೂ ವೃತ್ತಿಪರ ಶಿಕ್ಷಣಕ್ಕೂ ದಾನಿಗಳ ಮೂಲ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ ಎಂದರು.
ತ್ರಿವೇಣಿ ವಿದ್ಯಾಸಂಸ್ಥೆ ಅಧ್ಯಕ್ಷ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ಮಾತನಾಡಿದರು
ಮ್ಯಾನೇಜಿಂಗ್ ಟ್ರಸ್ಟ್ ಅಧ್ಯಕ್ಷ ಮಂದಪಂಡ ಸದಾ ಚಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ"ನಮ್ಮ ಟ್ರಸ್ಟ್ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಧನಸಹಾಯ ನೀಡುವ ದಾನಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ನೈಜವಾಗಿ ಆರ್ಥಿಕ ವಂಚಿತರಾದ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡಲು ಸಾಧ್ಯವಾಗುತ್ತದೆ. ಪೋಷಕರನ್ನು ಕಳೆದುಕೊಂಡ, ಅನಾಥ, ಅನಾರೋಗ್ಯ ಪೀಡಿತ ಹಾಗೂ ಆರ್ಥಿಕವಾಗಿ ತೀರ ದುರ್ಬಲವಾಗಿರುವ ಕುಟುಂಬದ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಮುರುವಂಡ ರಾಯ್ ಉತ್ತಪ್ಪ, ಪಂದ್ಯಂಡ ಸೂರಜ್ ಮಾಚಯ್ಯ, ಬೊಪ್ಪಂಡ ಕೆ. ಸುಬ್ರಮಣಿ, ಪಟ್ಟಡ ಧನು ಉತ್ಯಯ್ಯ, ಇತರರು ಇದ್ದರು.
ಇದೇ ಸಂದರ್ಭದಲ್ಲಿ ಹಲವಾರು ಅರ್ಹ ಹಾಗೂ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಶಿಕ್ಷಣ ತಜ್ಞರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
