ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷರ ನೇಮಕ: ಕುಮಾರಸ್ವಾಮಿ ಭೇಟಿ ಮಾಡಿದ ತಾಲ್ಲೂಕು ಅಧ್ಯಕ್ಷರ ನಿಯೋಗ
admincoorgdaily

ಮಡಿಕೇರಿ: ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇರುವ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ನೇಮಕವಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೊಡಗಿನ ವಿವಿಧ ತಾಲ್ಲೂಕುಗಳ ಜೆಡಿಎಸ್ ಅಧ್ಯಕ್ಷರ ನಿಯೋಗವು ಬೆಂಗಳೂರಿನ ಜೆಪಿ ಭವನದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗವು ಜಿಲ್ಲೆಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವಂತೆ ಒತ್ತಾಯಿಸಿತು. ನಿಯೋಗದ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ಕೂಡಲೇ ಪಕ್ಷದ ರಾಜ್ಯ ಮುಖಂಡ ಹಾಗೂ ಮಾಜಿ ಉಸ್ತುವಾರಿ ಸಚಿವ ಸಾ. ರ. ಮಹೇಶ್ ಅವರಿಗೆ ದೂರವಾಣಿ ಕರೆ ಮಾಡಿ, ಕೊಡಗು ಜಿಲ್ಲಾ ಘಟಕದ ವಿಚಾರವಾಗಿ ತುರ್ತು ಸಭೆ ನಡೆಸುವಂತೆ ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾಧ್ಯಕ್ಷರ ಹುದ್ದೆ ಖಾಲಿ ಇರುವುದರಿಂದ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶೀಘ್ರ ನೇಮಕ ಮಾಡುವಂತೆ ಸ್ಥಳೀಯ ಮುಖಂಡರು ಆಗ್ರಹಿಸಿದ್ದರು.
ನಿಯೋಗದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ರವಿ ಕಿರಣ್ ಶೆಟ್ಟಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಕೆ. ಶಿವದಾಸ್ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೋಟಿ ರಾಮಣ್ಣ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.