ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಘಟಕದಿಂದ ಬಡ ಕುಟುಂಬಕ್ಕೆ ಶಾಶ್ವತ ಸೂರು: ಗರಗಂದೂರಿನಲ್ಲಿ"ಬೈತ್ ಅಲ್ ಮಹಬ್ಬ’ ಮನೆ ಹಸ್ತಾಂತರ
admincoorgdaily

ವರದಿ :ಝಕರಿಯ ನಾಪೋಕ್ಲು
ಸುಂಟಿಕೊಪ್ಪ :ಮಾದಾಪುರ ಸಮೀಪದ ಗರಗಂದೂರಿನಲ್ಲಿ ಅರ್ಹ ಬಡ ಕುಟುಂಬವೊಂದಕ್ಕೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಘಟಕದ ವತಿಯಿಂದ ನಿರ್ಮಿಸಲಾದ "ಬೈತ್ ಅಲ್ ಮಹಬ್ಬ" ನೂತನ ಮನೆಯನ್ನು ಹಸ್ತಾಂತರಿಸಲಾಯಿತು.
ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಸೇವೆಜಲಪ್ರಳಯ,ಕೋವಿಡ್ ಸಂದರ್ಭದಲ್ಲಿ ಪರಿಹಾರ ಕಿಟ್ ವಿತರಣೆ,ರಂಝಾನ್ ಕಿಟ್, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಸಾಮೂಹಿಕ ವಿವಾಹ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಮಾನವೀಯ ಸೇವೆ ಸಲ್ಲಿಸುತ್ತಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಗರಗಂದೂರಿನ ನಿವಾಸಿ ಸುಲೈಮಾನ್ ಸಖಾಫಿ ಅವರಿಗೆ ನೂತನ ಮನೆಯ ಕೀಲಿಕೈಯನ್ನು ಸಂಘಟನೆಯ ನೇತಾರರು ಹಸ್ತಾಂತರಿಸಿದರು.ಈ ಮೂಲಕ ಅರ್ಹ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಿದಂತಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಲ್ಕೇರಿ ಗ್ರಾಮ ಪಂಚಾಯಿತಿ ಪಿಡಿಒ ಎ.ಎ.ಅಬ್ದುಲ್ಲ ಅವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಬ್ಬ ವ್ಯಕ್ತಿಗೆ ವಾಸಿಸಲು ಮನೆ ಮುಖ್ಯವಾಗಿದೆ.ಅದರ ಕನಸನ್ನು ಕೊಡಗು ಸುನ್ನಿ ವೆಲ್ಫೇರ್ ಯುಎಇ ಘಟಕ ನನಸು ಮಾಡಿದೆ ಎಂದು ಶ್ಲಾಘಿಸಿದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷರು ಹಾಗೂ ಯುಎಇ ಸಲಹಾ ಸಮಿತಿಯ ಸದಸ್ಯರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಮಾತನಾಡಿ ಕೊಡಗಿನಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಹಾಗೂ ಬಡ ಕುಟುಂಬಗಳ ನೆರವಿಗೆ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಸದಾ ಸ್ಪಂದಿಸುತ್ತಿದೆ ಹಾಗೂ ಸಂಕಷ್ಟದಲ್ಲಿರುವ ಧಾರ್ಮಿಕ ವಿದ್ವಂಸರುಗಳನ್ನು ಪತ್ತೆಹಚ್ಚಿ ಅವರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ವೆಲ್ಫೇರ್ ನ ಮುಖ್ಯ ಉದ್ದೇಶವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಎಲ್ಲರು ಕೈ ಜೋಡಿಸಬೇಕೆಂದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ.ಹಂಸ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕೇವಲ ಒಂದು ಸಂಸ್ಥೆಯಾಗಿ ಉಳಿಯದೆ ಪ್ರವಾಸಿಗಳಾದ ಇವರು ಹೊರದೇಶದಲ್ಲಿ ದುಡಿದು ಸಿಗುವ ವೇತನದಲ್ಲಿ ಒಂದು ಪಾಲನ್ನು ನಮ್ಮ ಜಿಲ್ಲೆಯ ಕಷ್ಟದಲ್ಲಿರುವ ಬಡವರ, ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ವಸತಿ ರಹಿತರಿಗೆ ಸ್ವಂತ ಮನೆಯ ಆಸರೆ ಕಲ್ಪಿಸಿಕೊಡುವ ಕಾರ್ಯ ನಿಜಕ್ಕೂ ಅತ್ಯಂತ ಪುಣ್ಯದ ಕೆಲಸ. ಭೇದಭಾವವಿಲ್ಲದೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯ ಕಾರ್ಯವೈಖರಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ,
ನೂತನ ಮನೆಗೆ ಪ್ರವೇಶಿಸಿದ ಕುಟುಂಬಕ್ಕೆ ಶುಭ ಹಾರೈಸಿದ ಅವರು, ಸಂಸ್ಥೆಯು ಇಂತಹ ಹಲವಾರು ಜನಪರ ಯೋಜನೆಗಳನ್ನು ಮುಂಬರುವ ದಿನಗಳಲ್ಲೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಿ ಎಂದು ಹಾರೈಸಿದರು. ಅಲ್ಲದೆ,ಸಮಾಜಕ್ಕೆ ಒಳಿತಾಗುವಂತಹ ಇಂತಹ ನಿಸ್ವಾರ್ಥ ಸೇವಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.
ವೆಲ್ಫೇರ್ ಯುಎಇ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ನಾಪೋಕ್ಲು,ಖಲೀಲ್ ಭಾಷ ಮಡಿಕೇರಿ ಹಾಗೂ ಸುಲೈಮಾನ್ ಸಖಾಫಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕೊಡಗು ಸುನ್ನಿ ವೆಲ್ಫೇರ್ ಯುಎಇ ಘಟಕದ ವತಿಯಿಂದ ಮನೆ ನಿರ್ಮಾಣದ ಕಾಮಗಾರಿ ನಡೆಸಿದ ಗುತ್ತಿಗೆದಾರ ಉಮ್ಮರ್,ಅತ್ಯುತ್ತಮ ಮಾನವೀಯ ಪ್ರಶಸ್ತಿ ವಿಜೇತ ಪತ್ರಕರ್ತ ಅಶ್ರಫ್ ಸಿ.ಎ.ಚೆಯ್ಯಂಡಾಣೆ,ನೇಪಾಳದ ಕಠ್ಮಂಡುನಲ್ಲಿ ನಡೆದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ ಬಜೆಗುಂಡಿ ಗ್ರಾಮದ ಮೊಹಮ್ಮದ್ ಯಾಸಿನ್ ಹಾಗೂ ಮೊಹಮ್ಮದ್ ಹಫೀಝ್ ಅ ವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ ಹೊರ ತಂದಿರುವ ಸ್ಮರಣ ಸಂಚಿಕೆ "ಸೌರಭ ಕನೆಕ್ಟ್ ಕೊಡಗು-2026" ಅನ್ನು ಇದೆ ಸಂದರ್ಭ ಗಣ್ಯರು ಬಿಡುಗಡೆ ಗೊಳಿಸಿದರು.
ಅಲ್ ಹಾಜ್ ಅಬ್ದುಲ್ ಜಲೀಲ್ ನಿಝಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗರಗಂದೂರು ಜಮಾಅತ್ ಅಧ್ಯಕ್ಷ ಹನೀಫ್,ಮಹಲ್ ಖತೀಬ್ ಅಬ್ದುಲ್ ಹಕೀಂ ಅಹ್ಸನಿ,ಕೊಡಗು ಸುನ್ನಿ ವೆಲ್ಫೇರ್ ಯುಎಇ ಘಟಕದ ಪದಾಧಿಕಾರಿಗಳಾದ ಆಲಿ ಎಮ್ಮೆಮಾಡು,ಅಬ್ಬಾಸ್ ಸುಂಟಿಕೊಪ್ಪ,ನಿಝಾರ್ ಗುಂಡಿಕೆರೆ,ಮುಜೀಬ್ ಕಡಂಗ,ಹಸನ್ ಹಾಜಿ ಚಾಮಿಯಾಲ್, ಎಂ.ಎ.ಹಂಝ ಕಡಂಗ,ನಿಯಾಜ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಯುಎಇ ಕಾರ್ಯದರ್ಶಿ ಮುಜೀಬ್ ಕಡಂಗ ಸ್ವಾಗತಿಸಿ, ನಿಝಾರ್ ಗುಂಡಿಕೆರೆ ಸರ್ವರನ್ನು ವಂದಿಸಿದರು.