ಕೊಡಗು ಬಂದ್ ನಿರ್ಧಾರ : ರೈತ ಸಂಘದ ಪೂರ್ವಭಾವಿ ಸಭೆ

Jul 27, 2026 - 18:25
 0  324
ಕೊಡಗು ಬಂದ್ ನಿರ್ಧಾರ : ರೈತ ಸಂಘದ ಪೂರ್ವಭಾವಿ ಸಭೆ

ಪೊನ್ನಂಪೇಟೆ ,27; ಬಿಡದಿ ರೈತಪರ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಕ್ರಮ ಖಂಡಿಸಿ ಕೊಡಗು ಬಂದ್ ಕರೆ ನೀಡುವ ಪೂರ್ವಭಾವಿ ಸಭೆಯನ್ನು ಜುಲೈ 29 ರಂದು ಗೋಣಿಕೊಪ್ಪ ಮತ್ತು ಸೋಮವಾರಪೇಟೆಯಲ್ಲಿ ಸಭೆ ನಡೆಸಿ ಪ್ರಕಟಿಸಲಾಗುವುದು ಎಂದು ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಕಾನೂನು ಸಲಹೆಗಾರ ಹೇಮಚಂದ್ರ ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಈ ಬಗ್ಗೆ ತಿಳಿಸಿದ ಅವರು, ಸಂಘ- ಸಂಸ್ಥೆ ಪ್ರಮುಖರು, ಪಕ್ಷಗಳ ಮುಖಂಡರು ಸೇರಿದಂತೆ ಪ್ರಮುಖರನ್ನು ಸಭೆಗೆ ಆಹ್ವಾನಿಸಿ ಬಂದ್ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಬಂದ್ ನಡೆಸಲು ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಲಹೆ, ಮಾರ್ಗದರ್ಶನ ಪಡೆದು ಮುಂದುವರಿಯಲಾಗುವುದು.

ಬುಧವಾರ ಬೆಳಗ್ಗೆ 10.30 ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣ ಮತ್ತು ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು. ಈ ಬಗ್ಗೆ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಸ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

 ಹೋರಾಟದಿಂದ ರೈತರನ್ನು ವಶಕ್ಕೆ ಪಡೆದು, ಸುತ್ತಾಡಿಸಿ, ಬಂಧನದಲ್ಲಿಟ್ಟಿರುವುದು ಪೊಲೀಸ್ ಇಲಾಕೆ ನಡೆ ಸರಿಯಾಗಿಲ್ಲ. ಮಹಿಳೆಯರು ಸೇರಿದಂತೆ ರೈತರು ಕೂಡ ಇದರಿಂದ ತೊಂದರೆ ಅನುಭವಿಸಲಾಗಿದೆ. ಇದರಿಂದಾಗಿ ಕ್ರಮವನ್ನು ಖಂಡಿಸಿ ಮುಂದುವರಿಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ, ಬೆಂಬಲವನ್ನು ಪಡೆದು ಮುಂದುವರಿಯಲಾಗುವುದು ಎಂದು ತಿಳಿಸಿದರು.

 ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ. ಎಂ. ದಿನೇಶ್ ಮಾತನಾಡಿ, ರೈತರನ್ನು ನಡೆಸಿಕೊಂಡ ರೀತಿಯನ್ನು ರೈತ ಸಂಘ ಖಂಡಿಸುತ್ತದೆ. ರೈತರನ್ನು ಕಡೆಗಣಿಸಿ ಸರ್ಕಾರ ಉಳಿದಿರುವ ಇತಿಹಾಸವಿಲ್ಲ. ಇದರಿಂದಾಗಿ ಕ್ರಮವನ್ನು ಖಂಡಿಸಲು ಸೂಕ್ತ ನಿದೇರ್ಶನ ಪಡೆದುಕೊಂಡು ಮುಂದುವರಿಯಲು ಸಭೆ ನಡೆಸಲಾಗುವುದು ಎಂದು ತಿಳಿಸಿದರು. ರೈತ ಮುಖಂಡ ಪುಚ್ಚಿಮಾಡ ರಾಯ್ ಮಾದಪ್ಪ ಮಾತನಾಡಿ, ನಾವು ಯಾವ ಪಕ್ಷದ ಬೆಂಬಲ ಪಡೆದು ಹೋರಾಟ ನಡೆಸುತ್ತಿಲ್ಲ. ಇಲ್ಲಿವರೆಗೂ ಸಂಘ ರೈತ ಪರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಯಾವ ಪಕ್ಷದ ಬೆಂಬಲವನ್ನು ಕೇಳಿಲ್ಲ ಎಂದು ತಿಳಿಸಿದರು.

ಈಗಿನ ಶಾಸಕ ಎ. ಎಸ್. ಪೊನ್ನಣ್ಣ ಅವರಿಗೆ ಮೊದಲ ಬಾರಿಗೆ ಮಡಿಕೇರಿ ರೈತ ಭವನದಲ್ಲಿ ನಡೆದ ಹೋರಾಟದಲ್ಲಿ ಮೊದಲ ಬಾರಿಗೆ ವೇದಿಕೆ ನೀಡುವ ಮೂಲಕ ಅವಕಾಶ ಮಾಡಿಕೊಟ್ಟಿದೆ. ನಮ್ಮ ಸಂಘದ ಅಧ್ಯಕ್ಷರ ಹಿಂದೆ ನಿಂತು ಅವರು ಹೋರಾಟದಲ್ಲಿ ಭಾಗಿಯಾಗಿರುವುದನ್ನು ಕೂಡ ನಡೆದಿತ್ತು. ಪಕ್ಷದ ಪರವಾಗಿ ನಾವು ತೊಡಗಿಕೊಂಡಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಜಿಲ್ಲಾ ಉಪಾಧ್ಯಕ್ಷ ಹೂವಯ್ಯ, ಸೋಮವಾರಪೇಟೆ ತಾಲುಕು ಸಂಚಾಲಕ ಎಚ್. ಇ. ರಮೇಶ್, ಪ್ರಮುಖರಾದ ಪೂಣಚ್ಚ, ಶಶಿ ಪೂಣಚ್ಚ, ಕಾಮೇಯಂಡ ಚಂಗಪ್ಪ ಇತರರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0