ಸಚಿವ ಸ್ಥಾನ ಸಿಗದೆ ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಬೇಸರ
ಮಡಿಕೇರಿ ಆ.3 : ರಾಜ್ಯ ಸರಕಾರದ ಸಂಪುಟ ಪುನರ್ ರಚನೆಯ ಸಂದರ್ಭ ಸಚಿವ ಸ್ಥಾನ ಸಿಗದೆ ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಇಬ್ಬರೂ ಸಚಿವರಾಗಿದ್ದರೆ ಕೊಡಗಿನ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು ತಿಳಿಸಿದ್ದಾರೆ. Njn
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದರಿಂದ ಕೊಡವ ಸಮುದಾಯ ಮತ್ತು ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ಅತ್ಯಂತ ಅನುಭವಿ ರಾಜಕಾರಣಿ ಹಾಗೂ ಈ ಹಿಂದೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಲಭಿಸುವ ಎಲ್ಲಾ ವಿಶ್ವಾಸವಿತ್ತು. ಆದರೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗಿದೆ. ಈ ಸ್ಥಾನದಿಂದ ಕೊಡವರಿಗೆ ಹಾಗೂ ಕೊಡಗು ಜಿಲ್ಲೆಗೆ ಯಾವುದೇ ಲಾಭವಿಲ್ಲ. ಪಕ್ಷ ಸಂಘಟನೆಗೂ ಇದು ತೊಡಕಾಗಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಅಭಿಲಾಷೆ ಎಲ್ಲರಲ್ಲಿಯೂ ಇತ್ತು. ಆದರೆ ಇದೀಗ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪಿ ಹೋಗಿರುವುದರಿಂದ ಕೊಡವರಿಗೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ನೋವುಂಟಾಗಿದೆ. ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದು, ಪಕ್ಷದ ಬಲವೂ ಹೆಚ್ಚಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕೂಡ ಜನಸ್ನೇಹಿ ಗುಣಗಳೊಂದಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೆ ರಾಜಕೀಯ ನೈಪುಣ್ಯತೆಯನ್ನೂ ಹೊಂದಿರುವ ಇವರು ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನಮನ ಗೆದ್ದು ಗಮನ ಸೆಳೆದಿದ್ದಾರೆ.
ಕೊಡಗಿನ ಇಬ್ಬರು ಶಾಸಕರು ಸಚಿವರಾಗಿದ್ದರೆ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳುತ್ತಿತ್ತಲ್ಲದೆ ಪಕ್ಷ ಸಂಘಟನೆಗೂ ಬಲ ಬರುತ್ತಿತ್ತು. ಇನ್ನಾದರೂ ಮುಖ್ಯಮಂತ್ರಿಗಳು ಕಾವೇರಿ ನಾಡು ಕೊಡಗಿನ ಬಗ್ಗೆ ಕರುಣೆ ತೋರಿ ಸಚಿವ ಸ್ಥಾನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನು ಮುದ್ದಪ್ಪ ಒತ್ತಾಯಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
