ಕೊಡವ ಕೌಟುಂಬಿಕ ಕ್ರಿಕೆಟ್;289 ಕುಟುಂಬಗಳು ನೋಂದಣಿ
ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಉತ್ಸವವೂ ಹಾಕಿ ಉತ್ಸವದ ಜೊತೆ-ಜೊತೆಯಾಗಿಯೇ ಪ್ರಸಕ್ತ ವರ್ಷ ನಿಗದಿಯಾಗಿದೆ.
ಏಪ್ರಿಲ್ 5 ರಿಂದ ಚೇನಂಡ ಕಪ್ ಕೌಟುಂಬಿಕ ಹಾಕಿ ನಮ್ಮೆ ಆರಂಭಗೊಳ್ಳಲಿದ್ದರೆ ಏಪ್ರಿಲ್ 3 ರಿಂದಲೇ ಈ ಬಾರಿಯ ಮುಕ್ಕಾಟಿರ ಕಪ್ (ಬೇತ್ರಿ) ಕ್ರಿಕೆಟ್ ಉತ್ಸವವೂ ಆರಂಭಗೊಳ್ಳುತ್ತಿದೆ. ಬೇತ್ರಿ ಮುಕ್ಕಾಟಿರ ಕುಟುಂಬಸ್ಥರು ಕ್ರಿಕೆಟ್ ಪಂದ್ಯಾವಳಿ ಆಯೋಜನೆಯ ಉಸ್ತುವಾರಿ ಹೊಂದಿದ್ದು, ಪುರುಷರ ವಿಭಾಗದಲ್ಲಿ ಈ ಬಾರಿ 289 ಕುಟುಂಬಗಳು ಪಾಲ್ಗೊಳ್ಳಲಿವೆ. ಕಳೆದ ವರ್ಷ ಹುದಿಕೇರಿಯಲ್ಲಿ ನಡೆದ ಚೆಕ್ಕೆರ ಕಪ್‌ನಲ್ಲಿ 281 ತಂಡಗಳು ಭಾಗವಹಿಸಿದ್ದವು. ಈ ಬಾರಿ ತಂಡಗಳ ಸಂಖ್ಯೆ 289ಕ್ಕೆ ಏರಿದ್ದು, ಈತನಕದ ಕ್ರಿಕೆಟ್ ಉತ್ಸವದಲ್ಲಿ ಅತೀ ಹೆಚ್ಚು ತಂಡಗಳು ಪಾಲ್ಗೊಂಡಿರುವ ದಾಖಲೆಯಾಗಿದೆ.
ಮಹಿಳಾ ವಿಭಾಗದಲ್ಲಿ ಈತನಕ 44 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಮಹಿಳಾ ತಂಡಗಳ ನೋಂದಣಿಗೆ ಏಪ್ರಿಲ್ 4 ರವರೆಗೂ ಕಾಲಾವಕಾಶವಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಕ್ರಿಕೆಟ್ ಉತ್ಸವ ಈ ಬಾರಿ ಮೂರ್ನಾಡು ಹಾಗೂ ಅರಮೇರಿಯಲ್ಲಿ ಜರುಗಲಿದೆ. ಏ.3 ರಂದು ಮೂರ್ನಾಡುವಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.