2026ರ ಏಪ್ರಿಲ್2 ರಿಂದ ಕೊಡವ ಕೌಟುಂಬಿಕ ಮುಕ್ಕಾಟಿರ ಕ್ರಿಕೆಟ್ ಕಪ್
admincoorgdaily

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವ ೨೦೨೬ರ ಏ.೨ರಿಂದ ಆರಂಭವಾಗಲಿದೆ ಎಂದು ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವ ಸಮಿತಿ ಅಧ್ಯಕ್ಷ ಮುಕ್ಕಾಟಿರ.ಸುರೇಶ್ ತಿಳಿಸಿದ್ದಾರೆ.
ಕೊಡವ ಕುಟುಂಬಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಉತ್ಸವ-ಮುಕ್ಕಾಟರ ಕಪ್ ಕ್ರಿಕೆಟ್-೨೦೨೬ ಅನ್ನು ಈ ಬಾರಿ ಬೇತ್ರಿ ಮುಕ್ಕಾಟರ ಕುಟುಂಬಸ್ಥರಾದ ನಾವು ಆಯೋಜಿಸುತ್ತಿದ್ದೇವೆ. ಕಳೆದ ವರ್ಷ ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್ ಕ್ರಿಕೆಟ್ ಫೈನಲ್ಸ್ ಸಂದರ್ಭ ಕೊಡವ ಕ್ರಿಕೆಟ್ ಅಕಾಡೆಮಿ ಹಾಗೂ ಚೆಕ್ಕೇರ ಕುಟುಂಬದಿಂದ ಧ್ವಜ ಸ್ವೀಕಾರ ಮಾಡಿದ್ದು, ಈ ಬಾರಿ ಮುಕ್ಕಾಟಿರ ಕಪ್ ಕ್ರಿಕೆಟ್ ಉತ್ಸವಕ್ಕೆ ಸಿದ್ದತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು ಹಲವು ಸಭೆಗಳನ್ನು ನಡೆಸಲಾಗಿದೆ. ಏ.೨ ರಿಂದ ಪಂದ್ಯಾವಳಿಯು ಪ್ರಾರಂಭಗೊಳ್ಳಲಿದೆ. ಪಂದ್ಯಾಟವನ್ನು ಈ ಬಾರಿ ಎರಡು ಕಡೆಗಳಲ್ಲಿ ನಡೆಸಲಾಗುತ್ತಿದೆ. ಆರಂಭಿಕ ಸುತ್ತಿನ ಪಂದ್ಯಗಳಿಗೆ ಅರಮೇರಿ ಕಳಂಚೇರಿಯ ಎಸ್‌ಎಂಎಸ್ ವಿದ್ಯಾಪೀಠದ ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ.
ಮುಖ್ಯ ಮೈದಾನವಾಗಿ ಮೂರ್ನಾಡಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷ ೩೦೦ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರೊಂದಿಗೆ ಕೌಟುಂಬಿಕ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ನಾವು ಮುಂದುವರೆಸುತ್ತಿದ್ದು, ೧೦೦ಕ್ಕೂ ಹೆಚ್ಚು ಮಹಿಳಾ ತಂಡಗಳನ್ನು ನಿರೀಕ್ಷೆ ಮಾಡಲಾಗಿದೆ. ವಿಜೇತರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೌಟುಂಬಿಕ ಕ್ರಿಕೆಟ್ ಉತ್ಸವ ಸಮಿತಿ ೨೦೨೬ರ ಕಾರ್ಯದರ್ಶಿ ಎಂ.ಪೊನ್ನಣ್ಣ, ಜಂಟಿ ಖಜಾಂಚಿ ಮುಖೇಶ್ ಅಯ್ಯಪ್ಪ, ಪ್ರಮುಖರಾದ ರವಿ ಚೀಯಣ್ಣ ಇದ್ದರು.