ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್; ಟೀಮ್ ಕೊಡವ ಟ್ರೈಬ್, ಎಂ.ಟಿ.ಬಿ ರಾಯಲ್ಸ್ ಗೆ ಗೆಲುವು

ಕೊಡವ ಲೆದರ್ ಬಾಲ್ ಕ್ರಿಕೆಟ್   ಲೀಗ್; ಟೀಮ್  ಕೊಡವ ಟ್ರೈಬ್, ಎಂ.ಟಿ.ಬಿ ರಾಯಲ್ಸ್  ಗೆ  ಗೆಲುವು

ಪೊನ್ನಂಪೇಟೆ; ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 9 ನೇ ದಿನದಾಟದಲ್ಲಿ ಟೀಮ್ ಕೊಡವ ಟ್ರೈಬ್ ಮತ್ತು ಎಂ.ಟಿ.ಬಿ ರಾಯಲ್ಸ್ ಗೆಲುವು ಸಾಧಿಸಿದವು.

ತಾ.18 ರ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಡವ ಟ್ರೈಬ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ, ಕೂರ್ಗ್ ಯುನೈಟೆಡ್ ಗೆ 167 ರನ್ ಗಳ ಗುರಿ ನೀಡಿತು. ಅಂಕುಶ್ ಬೋಪಣ್ಣ 53 ಎಸೆತಗಳಲ್ಲಿ 70 ರನ್ ಬಾರಿಸಿದರು.

ಕೂರ್ಗ್ ಯುನೈಟೆಡ್ ಪರ ಶರತ್ 4 ವಿಕೆಟ್ ಗಮನ ಸೆಳೆದರು. ಗೆಲ್ಲಲು 168 ರನ್ ಗಳ ಗುರಿ ಬೆನ್ನಟ್ಟಿದ ಕೂರ್ಗ್ ಯುನೈಟೆಡ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಎಂ. ಎ ತಿಮ್ಮಯ್ಯ 38 ಎಸೆತಗಳಲ್ಲಿ 33 ರನ್ ಗಳಿಸಿದರು.

ಟೀಮ್ ಕೊಡವ ಟ್ರೈಬ್ ಪರ ಆಯುಷ್ ಪೊನ್ನಪ್ಪ 4 ವಿಕೆಟ್ ಕಬಳಿಸಿ ಮಿಂಚಿದರು. ಟೀಮ್ ಕೊಡವ ಟ್ರೈಬ್ ನ ಅಂಕುಶ್ ಬೋಪಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಬ್ಲೇಜ್ ಬ್ರಿಗೇಡ್ ಎಂ.ಟಿ.ಬಿ ರಾಯಲ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ಲೇಜ್ ಬ್ರಿಗೇಡ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 101 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಧನುಷ್ 25 ಎಸೆತಗಳಲ್ಲಿ 20 ರನ್ ಗಳಿಸಿದರು. ಎಂಟಿಬಿ ರಾಯಲ್ಸ್ ನ ಅಯ್ಯಪ್ಪ 2 ವಿಕೆಟ್ ಪಡೆದರು. ಗೆಲ್ಲಲು 102 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ 16.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ 4 ವಿಕೆಟ್ ಗಳ ಗೆಲುವು ಸಾಧಿಸಿತು.

ಅಪ್ಪಯ್ಯ 32 ಎಸೆತಗಳಲ್ಲಿ 37 ರನ್ ಗಳಿಸಿದರು. ಬ್ಲೇಜ್ ಬ್ರಿಗೇಡ್ ಪರ ಸಂಜು ಬೋಪಯ್ಯ 3 ವಿಕೆಟ್ ಪಡೆದರು. ಎಂ. ಟಿ. ಬಿ ರಾಯಲ್ಸ್ ನ ಅಯ್ಯಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ನಾಳಿನ ಪಂದ್ಯಗಳು: ಬೆಳಗ್ಗೆ 9.30 ಕ್ಕೆ: ಪ್ರಗತಿ ಕ್ರಿಕೆಟ್ ಅಕಾಡಮಿ V/S ಟೀಮ್ ಕೊಡವ ಟ್ರೈಬ್.

ಮಧ್ಯಾಹ್ನ 1.30 ಕೂರ್ಗ್ ಯುನೈಟೆಡ್ V/S ಬ್ಲೇಜ್ ಬ್ರಿಗೇಡ್