ಏ.6ರಿಂದ 19ರವರೆಗೆ ಗೋಣಿಕೊಪ್ಪದಲ್ಲಿ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್
admincoorgdaily

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ ಏ.6 ರಿಂದ ಏ.19 ರವರೆಗೆ ಗೋಣಿಕೊಪ್ಪದಲ್ಲಿ ನಡೆಯಲಿದೆ ಎಂದು ಕೂರ್ಗ್ ಕ್ರಿಕೆಟ್ ಫೌಂಡೇಶನ್ ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದರು.
ಗೋಣಿಕೊಪ್ಪದ ಕಾವೇರಿ ಕಾಲೇಜು ಮೈದಾನದಲ್ಲಿ 14 ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಎಲ್ಲಾ ಕೊಡವ ಭಾಷಿಕ ಜನಾಂಗದವರಿಗೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಮಾತ್ರವಲ್ಲದೆ ಜಿಲ್ಲೆಯ ಹೊರಗೆ ನೆಲೆಸಿರುವ ಕೊಡವರು ಹಾಗೂ ಕೊಡವ ಭಾಷಿಕರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
180 ಕಳೆದ ಬಾರಿ 175 ಆಟಗಾರರು ಪಾಲ್ಗೊಂಡಿದ್ದು, ಈ ಬಾರಿ 25ಕ್ಕೂ ಅಧಿಕ ಕ್ರೀಡಾಪಟುಗಳು ಆಡಲಿದ್ದಾರೆ. ಈಗಾಗಲೇ 12 ತಂಡಗಳು ಆಯ್ಕೆಯಾಗಿದ್ದು, ಹರಾಜು ಪ್ರಕ್ರಿಯೆಯ ಮೂಲಕ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. ಆಟಗಾರರು ಆನ್‌ಲೈನ್ ಮುಖಾಂತರ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಕೊಡಗು, ಮೈಸೂರು, ಮಂಗಳೂರು, ಚೆನ್ನೈ, ಪಾಂಡಿಚೇರಿ ಸೇರಿದಂತೆ ಉತ್ತರ ಭಾರತದ ಪ್ರತಿಷ್ಠಿತ ಆಟಗಾರರು ಕೂಡ ಪಾಲ್ಗೊಳ್ಳಲಿದ್ದಾರೆ. ಸೀಸನ್-3ರ ವಿಜೇತರಿಗೆ ಆಕರ್ಷಕ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಡಗಿನ ಕ್ರೀಡಾ ಪ್ರತಿಭೆಗಳು ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಈ ಕಾರಣಕ್ಕಾಗಿಯೇ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತೇಜನ ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ 9945122952, 9686107297 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಕಾರ್ಯದರ್ಶಿ ಕೀತಿಯಂಡ ಗಣಪತಿ, ಸಂಚಾಲಕರಾದ ಅನ್ನಳಮಾಡ ರಾಯ್ ಚಿಣ್ಣಪ್ಪ, ನಿರ್ದೇಶಕ ಕುಲ್ಲೇಟಿರ ಶಾಂತ ಕಾಳಪ್ಪ, ಪಂದ್ಯಾಟದ ನಿರ್ವಾಹಕರಾದ ಮಡ್ಲಂಡ ದರ್ಶನ್ ಇದ್ದರು.