Kodagu

ಕೊಂಡಂಗೇರಿ: ಮಸೀದಿಗೆ ಹೋದ ಯುವಕ ಮರಳಿ ಬರಲಿಲ್ಲ: ಕೆರೆಯಲ್ಲಿ ಶವ ಪತ್ತೆ

admincoorgdaily

ಕೊಂಡಂಗೇರಿ: ಮಸೀದಿಗೆ ಹೋದ ಯುವಕ ಮರಳಿ ಬರಲಿಲ್ಲ: ಕೆರೆಯಲ್ಲಿ ಶವ ಪತ್ತೆ

ಮಡಿಕೇರಿ: ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಂಗೇರಿ ಗ್ರಾಮದ ಎಲಿಯಂಗಾಡ್ ನಲ್ಲಿ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಎಲಿಯಂಗಾಡ್ ನಿವಾಸಿ ಮಹಮ್ಮದ್ ಅಲಿ (28)‌ಎಂದು ಗುರುತಿಸಲಾಗಿದೆ. ಎಂದಿನಂತೆ ಮಂಗಳವಾರ ಬೆಳಿಗ್ಗೆ ಮಹಮ್ಮದ್ ಅಲಿ ಸ್ಕೂಟಿಯಲ್ಲಿ ಮಸೀದಿಗೆ ತೆರಳಿದ್ದರು.

 ಮಧ್ಯಾಹ್ನದವರೆಗೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿಗೆ ಸೇರಿದ ಕೆರೆಯ ಸಮೀಪ ಮಹಮ್ಮದ್ ಅಲಿ ಅವರ ಸ್ಕೂಟಿ ಪತ್ತೆಯಾಯಿತು. ಅನುಮಾನಗೊಂಡ ಸ್ಥಳೀಯರು ಕೆರೆಯಲ್ಲಿ ಪರಿಶೀಲನೆ ನಡೆಸಿದಾಗ ಅವರ ಟೋಪಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.

ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಕೆರೆಯಲ್ಲಿ ಶೋಧ ನಡೆಸಿದಾಗ ಮಹಮ್ಮದ್ ಅಲಿ ಅವರ ಮೃತದೇಹ ಪತ್ತೆಯಾಗಿದೆ. ನಂತರ ಶವವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಳ್ಳಲಾಯಿತು. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.