ಕುಶಾಲನಗರ:ಹೌಸಿಂಗ್ ಬೋರ್ಡ್ ನಲ್ಲಿ ಪುಸ್ತಕ ಗೂಡು ಲೋಕಾರ್ಪಣೆ
ಕುಶಾಲನಗರ,ಜುಲೈ 19: ಕೊಡಗಿನ ಪ್ರಮುಖ ನಗರವಾದ ಕುಶಾಲನಗರ ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಬಡಾವಣೆ ನಿವಾಸಿಗಳೇ ಜತೆಗೂಡಿ ಸತ್ಕಾರ್ಯ ಹೊಸ ಗೃಹ ಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಿಸುವ ಮೂಲಕ ಈ ಸಂಘದ ವತಿಯಿಂದ ತಮ್ಮ ಬಡಾವಣೆಯ ಉದ್ಯಾನವನದಲ್ಲಿ ರೂ.3.75 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೊಸ ಪರಿಕಲ್ಪನೆಯ ಪುಸ್ತಕಗಳ ಸಂಗ್ರಹಾಲಯದ ಪುಸ್ತಕ ಗೂಡು ಭಾನುವಾರ ಲೋಕಾರ್ಪಣೆಗೊಂಡಿತು.
ಪುಸ್ತಕ ಗೂಡಿನ ಕಟ್ಟಡ ಉದ್ಘಾಟಿಸಿ ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಎನಿಸಿದ ಕುಶಾಲನಗರ ಪಟ್ಟಣದಲ್ಲಿ ಕಳಶಪ್ರಾಯದಂತೆ ಈ ಹೊಸ ಬಡಾವಣೆಯಲ್ಲಿ ನಿವಾಸಿಗಳು ಹೊಸ ಪರಿಕಲ್ಪನೆಯಿಂದ ಆರಂಭಿಸಿರುವ ಪುಸ್ತಕ ಗೂಡು ಮುಂದಿನ ದಿನಗಳಲ್ಲಿ ಜೇನುಗೂಡು ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆಯುವ ಮೂಲಕ ಮಕ್ಕಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವಂತಾಗಲಿ.ಸಾರ್ವಜನಿಕ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಇಟ್ಟು ಜನರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಹುಟ್ಟಿಸಲು ಇದು ತುಂಬಾ ಸಹಕಾರಿಯಾಗಿದೆ ಎಂದರು.
ಇಂದಿನ ಸಮಾಜದ ನಿರೀಕ್ಷೆಗೆ ಅನುಗುಣವಾಗಿ ಹೊಸ ಹೌಸಿಂಗ್ ಬಡಾವಣೆಯ ನಿವಾಸಿಗಳು ಸೌಹಾರ್ದತೆ, ಭಾತೃತ್ವದಿಂದ ಒಗ್ಗೂಡಿ ಸತ್ಕಾರ್ಯ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸುವ ಮೂಲಕ ಸಾಮಾಜಿಕವಾಗಿ ಹಾಗೂ ರಚನಾತ್ಮಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಈ ಸಂಘದ ವತಿಯಿಂದ ಮಕ್ಕಳು ಹಾಗೂ ಜನರಲ್ಲಿ ಜ್ಞಾನಾರ್ಜನೆ ಬೆಳೆಸುವ ದಿಸೆಯಲ್ಲಿ ಆರಂಭಿಸಿರುವ ಪುಸ್ತಕ ಗೂಡಿನ ಸ್ಥಾಪನೆಯು ಜ್ಞಾನದ ಅಭಿವೃದ್ಧಿಯ ದ್ಯೋತಕ ಹಾಗೂ ಮಾದರಿ ಕಾರ್ಯ ಎಂದು ಶಶಿಧರ್ ಶ್ಲಾಘಿಸಿದರು .
ಪುಸ್ತಕ ಗೂಡಿನಿಂದ ಎಲ್ಲರೂ ಓದುವ ಹವ್ಯಾಸ ಬೆಳೆಸಲು ತುಂಬಾ ಸಹಕಾರಿಯಾಗಿದೆ. ಈ ಪುಸ್ತಕ ಗೂಡು ಸ್ಥಾಪಿಸಲು ಕಾರಣವಾಗಿರುವ ಈ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯವು ಇತರೆ ಬಡಾವಣೆಗಳಿಗೆ ಹಾಗೂ ಪಟ್ಟಣ, ನಗರಗಳಿಗೆ ಮಾದರಿಯಾದುದು ಎಂದು ವಿ.ಪಿ.ಶಶಿಧರ್ ಶ್ಲಾಘಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಇಟ್ಟು ಜನರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಹುಟ್ಟಿಸಲು ಇದು ತುಂಬಾ ಸಹಕಾರಿಯಾಗಿದೆ ಎಂದರು. ನಾವು ದಿನನಿತ್ಯ ಕೆಲಹೊತ್ತು ಮೊಬೈಲ್ ಫೋನ್ ಬದಿಗಿಟ್ಟು ಕೈಯಲ್ಲಿ ಪುಸ್ತಕ ಹಿಡಿದು ಪುಟಗಳನ್ನು ತಿರುವಿ ಹಾಕಿದರೆ ಉತ್ತಮ ವಿಚಾರಗಳನ್ನು ಮೆಲಕು ಹಾಕುವ ಮೂಲಕ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಈ ಪುಸ್ತಕ ಗೂಡು ದಿನನಿತ್ಯ ಮಕ್ಕಳು ಹವ್ಯಾಸಿ ಓದುಗರು ಸೇರಿದಂತೆ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಪುಸ್ತಕ ಗೂಡಿನಿಂದ ಸಮಕಾಲೀನ ಸಂದರ್ಭದ ಜ್ಞಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಂಡು ತನ್ಮೂಲಕ ಉತ್ತಮ ಜೀವನಮೌಲ್ಯಗಳು ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಶಿಧರ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಈ ಬಡಾವಣೆಯ ನಿವಾಸಿಗಳು ಎಲ್ಲರೂ ಸೇರಿ ವಿನೂತನವಾಗಿ ಆರಂಭಿಸಿರುವ ಪುಸ್ತಕ ಗೂಡಿನ ನಿರ್ಮಾಣವು ಬಹಳ ಮಹತ್ಕಾರ್ಯವಾಗಿದೆ. ಪುಸ್ತಕ ಗೂಡಿನಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಪುಸ್ತಕ ಪ್ರೇಮಿಗಳಾಗಿ ರೂಪುಗೊಂಡು ತಮ್ಮ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು ಎಂದರು. ಪುಸ್ತಕ ಪ್ರೇಮಿಯಾಗಿದ್ದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಿದ್ದರು.
ಬಿ.ಆರ್.ಅಂಬೇಡ್ಕರ್ ಅವರು, ‘ಪುಸ್ತಕಗಳಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ’ ಎಂದಿದ್ದಾರೆ. ಹಾಗಾಗಿ, ಈ ಪುಸ್ತಕ ಗೂಡು ಜ್ಞಾನದ ಕೇಂದ್ರವೂ ಆಗಬೇಕಾಗಿದೆ. ಇದು ಇನ್ನಷ್ಟು ಬೆಳೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ, ತಮ್ಮ ಬಡಾವಣೆ ಸೇರಿದಂತೆ ಪಟ್ಟಣದ ಜನತೆಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಹೊಸ ಪರಿಕಲ್ಪನೆಯೊಂದಿಗೆ ಬಡಾವಣೆಯ ನಿವಾಸಿಗಳು ಸೇರಿ ಪುಸ್ತಕ ಗೂಡು ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಪುಸ್ತಕ ಗೂಡಿನ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯಾನವನದಲ್ಲಿ ನಿರ್ಮಿಸಿರುವ ಪುಸ್ತಕ ಗೂಡಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಹಾಗೂ ಬಡಾವಣೆಯ ಮೌಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಸೂಕ್ತ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಜಿ.ಬಿ.ಜಗದೀಶ್ ಮಾತನಾಡಿ, ಪುಸ್ತಕ ಗೂಡಿನಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ಓಪ್ಪೋರಣವಾಗಿ ಜೋಡಿಸಲು ಪುಸ್ತಕದ ರಾಕ್ ಒದಗಿಸಲು ರೂ.25 ಸಾವಿರ ಮೊತ್ತದ ಧನಸಹಾಯ ಮಾಡುವುದಾಗಿ ಪ್ರಕಟಿಸಿದರು.
ಪುರಸಭೆಯ ಮಾಜಿ ಸದಸ್ಯ ಎಂ.ಕೆ.ಸುಂದರೇಶ್ ( ದಿನೇಶ್ ) ಮಾತನಾಡಿ, ಮಳೆ–ಗಾಳಿಯಿಂದ ಪುಸ್ತಕಗಳಿಗೆ ರಕ್ಷಣೆ ನೀಡಲು ಪುಸ್ತಕ ಗೂಡಿನ ಕಟ್ಟಡದ ಸುತ್ತಲಿನ ಕಿಟಕಿಗಳಿಗೆ ರಕ್ಷಣೆ ಒದಗಿಸಲು ತಾವು ಅಗತ್ಯ ಪ್ರಮಾಣದಲ್ಲಿ ಆರ್ಥಿಕ ನೆರವು ಒದಗಿಸಲಾಗುವುದು ಎಂದರು.
ಪುಸ್ತಕದ ಗೂಡಿನ ಪರಿಕಲ್ಪನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಕೆ.ಜಿ.ರೇಣುಕಸ್ವಾಮಿ , ಪುಸ್ತಕ ಗೂಡಿನ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಮೊಬೈಲ್ ಬಳಕೆಯ ಹಾವಳಿಯನ್ನು ಬಿಟ್ಟು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಉದಯಕುಮಾರ್, ಸಂಘದ ಉಪಾಧ್ಯಕ್ಷ ರುಕ್ಮಾಂಗದ, ಕಾರ್ಯದರ್ಶಿ ವಿಜೇತ ಪ್ರದೀಪ್, ನಿರ್ದೇಶಕರು ಇದ್ದರು. ಶಿಕ್ಷಕಿ ಎಂ.ತುಳಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ನಿರ್ದೇಶಕ ಎಸ್.ಎನ್.ಲೋಕೇಶ್ ಸ್ವಾಗತಿಸಿದರು. ಸಂಘದ ನಿರ್ದೇಶಕ ಟಿ.ಬಿ.ಮಂಜುನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ ಬಡಾವಣೆಯ ನಿವಾಸಿಗಳು ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಯ ನಾಗರಿಕರು ಇದ್ದರು.
ಹೌಸಿಂಗ್ ಬೋರ್ಡ್ ನ ಬಡಾವಣೆಯ ನಿವಾಸಿಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಬಡಾವಣೆಯ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಪರಿಹರಿಸಲು ಶಾಸಕ ಡಾ ಮಂತರ್ ಗೌಡ ಅವರೊಂದಿಗೆ ತಾವು ಕೂಡ ಶ್ರಮಿಸಲಾಗುವುದು.
ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಶಾಸಕರಾದ ಡಾ ಮಂತರ್ ಗೌಡ ಅವರ ವಿಶೇಷ ಪ್ರಯತ್ನದಿಂದ ಕುಶಾಲನಗರ ಪಟ್ಟಣದ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ರೂ.11 ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದರು.
ಶಾಸಕರಿಂದ ಪುಸ್ತಕ ಗೂಡು ಆರಂಭಕ್ಕೆ ಶುಭಾಶಯ: ಅನಿವಾರ್ಯ ಕಾರಣಗಳಿಂದ ಪುಸ್ತಕ ಗೂಡು ಆರಂಭೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಬಡಾವಣೆಯ ನಿವಾಸಿಗಳು ಸೇರಿ ಆರಂಭಿಸಿರುವ "ಪುಸ್ತಕ ಗೂಡು" ಮಕ್ಕಳು ಮತ್ತು ಜನರ ಜ್ಞಾನಾರ್ಜನೆಗೆ ಸಹಕಾರಿಯಾಗಲಿ ಎಂದು ಶಾಸಕ ಡಾ ಮಂತರ್ ಗೌಡ ತಾವು ಕಳಿಸಿದ ಲಿಖಿತ ಸಂದೇಶದಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ "ಪುಸ್ತಕ ಗೂಡು" ಉತ್ತಮವಾಗಿ ಬೆಳೆದು ಅಭಿವೃದ್ಧಿ ಹೊಂದಲು ಮತ್ತು ಮೂಲಸೌಕರ್ಯ ಒದಗಿಸಲು ಅಗತ್ಯ ಅನುದಾನ ಒದಗಿಸುವುದರೊಂದಿಗೆ ತಾವು ಸಹಕರಿಸುವುದಾಗಿ ತಾವು ಕಳುಹಿಸಿದ್ದ ಸಂದೇಶವನ್ನು ಸಭೆಯಲ್ಲಿ ತಿಳಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
