Kodagu

ಕುಶಾಲನಗರ : ವಿದ್ಯುತ್ ಸುರಕ್ಷತೆ ಹಾಗೂ ನೌಕರರ ಸಂಘಟನಾ ಸಭೆ

admincoorgdaily

ಕುಶಾಲನಗರ : ವಿದ್ಯುತ್ ಸುರಕ್ಷತೆ ಹಾಗೂ ನೌಕರರ ಸಂಘಟನಾ ಸಭೆ

ಕುಶಾಲನಗರ : ವಿದ್ಯುತ್ ಕೆಲಸ ನಿರ್ವಹಿಸುವಾಗ ಕ.ವಿ.ಪ್ರ.ನಿ.ದ ನೌಕರರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡುವ ಮೂಲಕ ವಿದ್ಯುತ್ ಅಪಘಾತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ ಎಂದು ಕ.ವಿ.ಪ್ರ.ನಿ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಬಲರಾಂ ಹೇಳಿದರು.

ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನೌಕರರ ಸಂಘ (659) ಬೆಂಗಳೂರು ಹಾಗೂ ಕೊಡಗು ಜಿಲ್ಲಾ ಸಮಿತಿ ಮಡಿಕೇರಿ ಆಶ್ರಯದಲ್ಲಿ ಆಯೋಜಿಸಿದ್ದ ವಿದ್ಯುತ್ ಸುರಕ್ಷತೆ ಮತ್ತು ನೌಕರರ ಸಂಘಟನಾ ಸಭೆ ಹಾಗೂ ಸಹಾಯಕ ಎಂಜಿನಿಯರ್ ದಿವಂಗತ ಡಿ.ಜಯರಾಮ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಸಂಸ್ಥೆಯ ಮತ್ತು ನೌಕರರ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. 2027ರ ವೇತನ ಪರಿಷ್ಕರಣೆ ಹಾಗೂ ಹೊಸ ಪೇ-ಸ್ಕೇಲ್ ಜಾರಿ, ವಿವಿಧ ಹುದ್ದೆಗಳಿಗೆ ಮಂಜೂರಾತಿ ಮತ್ತು ಅಗತ್ಯ ಸಿಬ್ಬಂದಿಗಳ ನೇಮಕಾತಿ, ನೌಕರರಿಗೆ ಕ್ಯಾಶ್‌ಲೆಸ್ ಮೆಡಿಕಲ್ ಕಾರ್ಡ್ ಸೌಲಭ್ಯ ಹಾಗೂ ಕಾಲಕಾಲಕ್ಕೆ ಬಡ್ತಿ ಪ್ರಕ್ರಿಯೆಗಳ ಸರಳೀಕರಣಕ್ಕೆ ಸಂಘ ಬದ್ಧವಾಗಿದೆ ಎಂದರು.

ಅರ್ಹರಿರುವ ಪ್ರತಿಯೊಬ್ಬ ನೌಕರರಿಗೂ ಶೇ. 100 ರಷ್ಟು ಸೌಲಭ್ಯಗಳು ಒದಗಿಸುವುದಕ್ಕೆ ಸಂಘ ಬದ್ಧವಾಗಿದೆ. ಸಂಸ್ಥೆಯ ಅಭಿವೃದ್ಧಿ ಹಾಗೂ ನೌಕರರ ಹಿತರಕ್ಷಣೆಗೆ ಸಂಘ ಒಗ್ಗಟ್ಟಿನಿಂದ ಶ್ರಮಿಸಲಿದೆ. ಸಾರ್ವಜನಿಕರಿಗೆ ಮತ್ತು ರೈತರಿಗೆ ನಿರಂತರ, ಅತ್ಯುತ್ತಮ ಸೇವೆ ನೀಡಲು ನೌಕರರ ಪಡೆ ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.

 ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನೌಕರರ ಸಂಘ (659) ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶಿವರಾಮ್ ಮಾತನಾಡಿ, ರಾಜ್ಯದಲ್ಲಿ 124 ವರ್ಷಗಳಿಂದ ವಿದ್ಯುತ್ ಬೆಳೆಕು ನೀಡುತ್ತಿದ್ದೇವೆ.ನಮ್ಮ ಸುರಕ್ಷತೆಗೆ ನಾವೇ ಕಾರಣ.ನಾವು ಕೆಲಸ‌ ಮಾಡುವ ಸಂದರ್ಭ ಸುರಕ್ಷತಾ ಸಾಧನಗಳನ್ನು ಸದ್ಭಳಕೆ‌ ಮಾಡುವ ಮೂಲಕ ಅಪಘಾತ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಕೆಪಿಟಿಸಿಎಲ್ ಇಲಾಖೆ ಆರ್ಥಿಕವಾಗಿ ಸಬಲೀಕರಣ‌ ಆಗುವಂತೆ ನಾವು ಶ್ರಮಿದಬೇಕು.ಇಲಾಖೆ ಸದೃಶವಾದರೆ ಮಾತ್ರ ನೌಕರರ ಹಿತರಕ್ಷಣೆ ಸಾಧ್ಯ ಎಂದರು.

ಕ.ವಿ.ಪ್ರ.ನಿ ನೌಕರರ ಸಂಘ ನೌಕರರ ಹಿತ ರಕ್ಷಣೆಗಾಗಿ ಶ್ರಮಿಸುತ್ತಿದೆ‌.ಆದ್ದರಿಂದ ಸಂಘದ ಬಲವರ್ಧನೆ ಹಾಗೂ ಸಂಘಟನೆಗೆ ನೌಕರರು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

 ಕರ್ನಾಟಕ ವಿದ್ಯುತ್ ಪ್ರಸಾರಣ ನಿಗಮ ನೌಕರರ ಸಂಘದ ರಾಜ್ಯ ಸಮಿತಿ ಖಜಾಂಚಿ ಸಿ.ವರದರಾಜು ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ವಿದಯ ಉತ್ಪಾದನೆಗೆ ಮೈಸೂರಿನ ರಾಜ್ಯ ವಂಶಸ್ಥರಾದ ರಾಣಿ ಕೆಂಪನಮ್ಮಾಮ್ಮಣಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಒತ್ತು ನೀಡಿದರು.ಇದರಿಂದ ನಾವು ವಿದ್ಯುತ್ ಇಲಾಖೆ ಕೆಲಸ ಮಾಡಲು ಅವಕಾಶ ದೊರೆಯಿತು.ಆದ್ದರಿಂದ ಮೈಸೂರಿನ ರಾಜಮನೆತನವನ್ನು ಸ್ಮರಿಸಬೇಕು ಎಂದರು.

 ಸಂಘದ ವತಿಯಿಂದ ಎಲ್ಲಾ ನೌಕರರು ಸಂಘಟಿತರಾಗಿ ಹೋರಾಟ ನಡೆಸಿದ ಮೇರೆಗೆ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದನ್ನು ಸರ್ಕಾರ ಕೈಬಿಟ್ಟಿದೆ ಎಂದರು‌. ಕೆಪಿಟಿಸಿಎಲ್ ನೌಕರರ ಕಾರ್ಯ ಒತ್ತಡ ತಗ್ಗಿಸುವಲ್ಲಿ ನಮ್ಮ ಹೋರಾಟ ಯಶಸ್ವಿಯಾಗಿದ್ದು,ಹೆಚ್ಚುವರಿ ಸಿಬ್ಬಂದಿಗಳನ್ನು ಇಲಾಖೆ ನೇಮಕ ಮಾಡಿದೆ ಎಂದರು. ವಿದ್ಯುತ್ ಕ್ಷೇತ್ರದಲ್ಲಿ ಅಪಘಾತ ಸಂಭವಿಸಿದಾಗ ನೌಕರರ ಕುಟುಂಬಕ್ಕೆ ಒಂದು ಕೋಟಿ ಇನ್ಸೂರೇನ್ಸ್ ಕೊಡಬಹುದು. ಆದರೆ ಪ್ರಾಣ ಕೊಡಲು ಸಾಧ್ಯವಿಲ್ಲ. ಆದ್ದರಿಂದ ನೌಕರರು ಸುರಕ್ಷತಾ ಕ್ರಮಗಳನ್ನು ಕೆಲಸ‌ಮಾಡುವ ಸ್ಥಳದಲ್ಲಿ ಅಳವಡಿಸಿಕೊಳ್ಳಬೇಕು. ಅಪಘಾತ ರಹಿತವಾಗಿ ವಯೋನಿವೃತ್ತಿ ಹೊಂದಬೇಕು ಎಂದರು.

ನೌಕರರ ಹಿತದೃಷ್ಟಿಯಿಂದ ಕಲ್ಯಾಣ ಮಂಟಪ, ವಸತಿ ಗೃಹ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲು ಸಂಘ ಶ್ರಮಿಸುತ್ತಿದೆ ಎಂದರು. ವಿದ್ಯುತ್ ಇಲಾಖೆಗೆ ಪವರ್ ಮ್ಯಾನ್ ಗಳೇ ಬೆನ್ನೆಲುಬು ಎಂದ ಅವರು ಜೈಕಿಸನ್,ಜೈಜವನ್,ಜೈ ಪವರ್ ಮ್ಯಾನ್‌ ಎಂದು ಘೋಷಣೆ ಕೂಗಿದರು.

ಕೊಡಗು ಸ್ಥಳೀಯ ಸಮಿತಿ ಅಧ್ಯಕ್ಷ ಶಿವಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕವಿಪ್ರನಿನಿ ಸಹ ಕಾರ್ಯದರ್ಶಿ ಸಂತೋಷ್,ಖಜಾನೆ ಸತ್ಯನಾರಾಯಣ,ಕುಮಾರ್,ಮೈಯ ವಿಭಾಗದ ಉಪಾಧ್ಯಕ್ಷ ಸಂದೀಪ್, ಮಹೇಶ್,ಮಹೇಂದ್ರ,ಮಡಿಕೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ನಾಯ್ಕ್,ಕುಶಾಲನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್.ಮಂಜುನಾಥ್, ಗೋಣಿಕೊಪ್ಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್.ಸತೀಶ್,ವಿರಾಜಪೇಟೆ ವಿಭಾಗದ ನೀತಾ,ಮಡಿಕೇರಿ ವಿಭಾಗದ ಸಿ.ಕುಮಾರ್,ಕೆ.ಎಂ.ದಿಲೀಪ್,ಮಡಿಕೇರಿ ಉಪ‌ ವಿಭಾಗದ ಸಹಾಯಕ ಲೆಕ್ಕಾಧಿಕಾರಿ ದರ್ಶನ್,ಸೋಮವಾರಪೇಟೆ ವಿಭಾಗದ ಭಗತ್,ಕುಶಾಲನಗರ ವಿಭಾಗದ ಪ್ರದೀಪ್, ಗೋಣಿಕೊಪ್ಪ ವಿಭಾಗದ ಸುನೀಲ್,ಮಡಿಕೇರಿ ಸಮಿತಿ ಸಂಘಟನಾ ಕಾರ್ಯದರ್ಶಿ ಕೃಷ್ಣರಾಜ್, ತಾಲ್ಲೂಕು ಪ್ರಾಥಮಿಕ ಸಮಿತಿ ಅಧ್ಯಕ್ಷ ಲವಕುಮಾರ್,ಕಾರ್ಯದರ್ಶಿ ಸುದೀಪ್ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

 ಇದೇ ಸಂದರ್ಭ ಸಮಿತಿ ವತಿಯಿಂದ ನಿವೃತ್ತ ನೌಕರರು,ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.ಇದೇ ವೇಳೆ ಚೆಸ್ಕಂ ಕಚೇರಿ ಆವರಣದಲ್ಲಿರುವ ಪ್ರಾಥಮಿಕ ಸಮಿತಿ ನೂತನ ಕಚೇರಿಯನ್ನು ರಾಜ್ಯಾಧ್ಯಕ್ಷ ಬಲರಾಂ ಉದ್ಘಾಟಿಸಿದರು.ಜೊತೆಗೆ ಶಾಖಾ ಆವರಣದಲ್ಲಿ ಗಿಡ ನೆಟ್ಟು ನೀರು ಹಾಕಿದರು.ಚೆಸ್ಕಂ ವಿಭಾಗೀಯ ಕಚೇರಿಯಿಂದ ವತಿಯಿಂದ ಗೌಡ ಸಮಾಜದ ವರೆಗೆ ಜಾಗೃತಿ ಜಾಥಾ ನಡೆಯಿತು. ವಿದ್ಯುತ್ ಇಲಾಖೆಯ ನೌಕರರು ಸುರಕ್ಷತಾ ವಸ್ತ್ರಗಳನ್ನು ಧರಿಸಿ ಬೈಕ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.