ಕುಶಾಲನಗರ : ಪ್ರಥಮ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ: ಬಸವಾದಿ ಶರಣರ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ‌ಅಳವಡಿಸಿಕೊಳ್ಳಬೇಕು; ಬಸವರಾಜ ಹೊರಟ್ಟಿ

Jun 24, 2026 - 10:49
Jun 24, 2026 - 10:50
 0  93
ಕುಶಾಲನಗರ : ಪ್ರಥಮ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ:  ಬಸವಾದಿ ಶರಣರ ತತ್ವ, ಆದರ್ಶಗಳನ್ನು  ತಮ್ಮ ಜೀವನದಲ್ಲಿ ‌ಅಳವಡಿಸಿಕೊಳ್ಳಬೇಕು; ಬಸವರಾಜ ಹೊರಟ್ಟಿ

ಕುಶಾಲನಗರ : ಬಸವಾದಿ ಶರಣರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ‌ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಧಾನ‌ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಮಂಗಳವಾರ ಇಲ್ಲಿನ ರೈತ ಭವನದಲ್ಲಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಶರಣ‌ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಶರಣ ಎಲ್ಲಿ ಇರುತ್ತಾರೊ ಅಲ್ಲಿ ಸಂಸ್ಕಾರ,ಸಾಹಿತ್ಯ ಸಂಗೀತ,ನಾಡುನುಡಿಯ ಸೇವ ಇರುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ನೀಡಬೇಕು.12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ಕೊಟ್ಟಿದ್ದರು.

ಆದರೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಬಿಲ್ ತರಲು ಸಾಧ್ಯವಾಗಿಲ್ಲ. ಮಹಿಳಾ ಮಸೂದೆ ತರುವ ಪ್ರಯತ್ನ ನಡೆಯುತ್ತಿದೆ.ಈ ಹಿಂದೆ ರಾಜ್ಯದಲ್ಲಿ ಶಿಕ್ಷಣ ಸಚಿವನಾದ‌ ಸಂದರ್ಭ ಶಿಕ್ಷಕಿಯರ ನೇಮಕಾತಿಯಲ್ಲಿ ಶೇ.52 ರಷ್ಟು ಮೀಸಲು ನೀಡಿದ್ದೆ ಇದಕ್ಕೆ ವಿರೋಧ ಕೂಡ ಬಂದಿತ್ತು ಎಂದರು. ಸದನದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದೇನೆ.ಮಹಿಳೆಯರು ಮಾತನಾಡುವಾಗ ಸದಸ್ಯರು ಗೌರವದಿಂದ ಕೇಳುತ್ತಾರೆ.ಯಾರೆಂದರೆ ಮಹಿಳೆಯರು ವಿಷಯದ ಕುರಿತು ಅಧ್ಯಯನ ಮಾಡಿಕೊಂಡು ಬಂದು ಮಾತನಾಡುತ್ತಾರೆ.ನಂತರ ಸದನದಲ್ಲಿ ಯುವಕರಿಗೆ ಅವಕಾಶ ಕೊಡುತ್ತೇನೆ ಎಂದರು. 

ಇದೀಗ ಶಾಲೆಗಳಲ್ಲಿ ಶೇ.65 ರಷ್ಟು ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಣ್ಣು ವಿದ್ಯಾವಂತೆಯಾದರೆ ಮಕ್ಕಳಿಗೂ ಉತ್ತಮ ಸಂಸ್ಕಾರ ಬರುತ್ತದೆ.ಕುಟುಂಬವು ಏಳಿಗೆಯಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ವಿದ್ಯಾವಂತರು,ಬುದ್ದಿವಂತರು ಹೆಚ್ಚಾದಷ್ಟು ಜಾತಿ ವ್ಯವಸ್ಥೆ ಕೂಡ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಹೊರಟ್ಟಿ‌ ಅವರು ರಾಜ್ಯದಲ್ಲಿ ಅನೇಕ ಮಂದಿ ವೀರಶೈವ ಲಿಂಗಾಯತ ಸಮುದಾಯ ಮುಖ್ಯಮಂತ್ರಿಗಳ ಆಡಳಿತ ನಡೆಸಿದರೂ ಯಾರಿಗೂ ಸರ್ಕಾರಿ‌ ಕಚೇರಿಗಳಲ್ಲಿ ಬಸವಣ್ಣ ಪೋಟೋ ಹಾಕಿಸಲು ಸಾಧ್ಯವಾಗಲಿಲ್ಲ.

ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಆದೇಶ ಹೊರಡಿಸಿ‌ ದಿಟ್ಟತನ ಪ್ರದರ್ಶಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ,ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ಕೂಡ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಶರಣರ ತತ್ವ ಹಾಗೂ ವಚನಗಳು ಪ್ರತಿಯೊಬ್ಬರಿಗೂ ದಾರಿದೀಪ‌ವಾಗಿವೆ. ಅವು ಉತ್ತಮ ಮಾರ್ಗದರ್ಶನ,ಆತ್ಮಪ್ರೇರಣೆ, ಆತ್ಮವಿಶ್ವಾಸ ಮೂಡಿಸುತ್ತವೆ.ಕೊಡಗನ್ನು ಆಳ್ವಿಕೆ ನಡೆಸಿದ ರಾಜರು ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ.ಸಾಂಸ್ಕೃತಿಕವಾಗಿ ಆಧ್ಯಾತ್ಮಿಕವಾಗಿ ಜಗತ್ತಿನ ಮನ್ನಣೆ ಗಳಿಸಿದೆ. ಕೊಡಗು ವೀರಪರಂಪರೆಯ ನಾಡು ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶ್ರೀಗಳು ಶರಣರು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಅಂತರ್ ಶಕ್ತಿಯ ಮೂಲಕ ವೈಜ್ಞಾನಿಕ ಸಂಶೋಧನೆ, ವೈಜ್ಞಾನಿಕ ಶಕ್ತಿ ತೋರಿಸಿಕೊಟ್ಟಿದ್ದಾರೆ‌ ಎಂದರು. ಕೊಡಗಿನಲ್ಲಿ ಮೊದಲ ಬಾರಿಗೆ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.ಇದು ಕೊಡಗಿನ ಇತಿಹಾಸದಲ್ಲಿ ಮರೆಯಾಗದ ಸಮ್ಮೇಳನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್ತು ಆರಂಭವಾಗಿ 40 ವರ್ಷ ಆಗಿದೆ.ಶರಣ ಸಾಹಿತ್ಯ ಶ್ರೀಮಂತಗೊಳಿಸಲು ಒತ್ತು ನೀಡಲಾಗಿದೆ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರಾಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯದ ಮೂಲ ಆಶಯ ಮನವನ ಕಲ್ಯಾಣವಾಗಿದೆ.ಆತ್ಮಕಲ್ಯಾಣದ ಜೊತೆಗೆ ಜಗತ್ತಿನ ಕಲ್ಯಾಣವನ್ನು ಶರಣ ಸಾಹಿತ್ಯ ಬಯಸಿದೆ ಎಂದರು.ಶರಣ ಸಾಹಿತ್ಯ ಒಂದು ಜಾತಿಗೆ, ವಿಚಾರಕ್ಕೆ ಸೀಮಿತವಲ,ವಿಚಾರ ಧಾರೆಗೆ ಸೀಮಿತವಲ್ಲ.ಎಲ್ಲವನ್ನೂ ಅಪ್ಪಿಕೊಂಡ ಧರ್ಮವೇ ಶರಣ ಧರ್ಮವಾಗಿದೆ. ಸಾಮಾಜಿಕ,ಆಧ್ಯಾತ್ಮಿಕ, ಸಾಹಿತ್ಯ ಕ್ರಾಂತಿ ಮಾಡಿದ ಬಸವಣ್ಣ ನವರ ವಿಚಾರಧಾರೆಗಳು ಇದೀಗೂ ಪ್ರಸ್ತುತವಾಗಿವೆ ಎಂದರು. ಅನುಭವ ಮಂಟಪ ಮಹಿಳಾ‌ ಜಾಗೃತಿ ಉಂಟುಮಾಡಿದ ತಾಣವಾಗಿದೆ.12ನೇ ಶತಮಾನದಲ್ಲಿ ಬಸವಾದಿ ಶರಣ ಸಾಹಿತ್ಯ ವಚನಗಳನ್ನು ಜನಸಮಾನಕ್ಕೆ ಮುಟ್ಟಿಸಬೇಕು ಎಂಬ ಉದ್ದೇಶದಿಂದ 1986ರಲ್ಲಿ ಶರಣ‌ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಅದೇ ರೀತಿ ಮಹಿಳೆಯರಿಗೆ ಕದಳಿ ವೇದಿಕೆ ಸ್ಥಾಪನೆ‌ ಮಾಡಿದ್ದೇವೆ ಎಂದು ಹೇಳಿದರು.

 ಶಾಸಕ ಡಾ.ಮಂತರ್ ಗೌಡ ಅವರು ಶರಣ‌ ಸಂಪದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರೂ.50 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಸಮ್ಮೇಳನಾಧ್ಯಕ್ಷರಾದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೊಡಗು ವಿಶ್ವ ವಿದ್ಯಾಲಯದಲ್ಲಿ ಶರಣ ಚಿಂತನೆ ಗಳ ಅಧ್ಯಯನಕ್ಕೆ ಬಸವ ಪೀಠ ಸ್ಥಾಪಿಸಬೇಕು.ಶಾಲಾ ಕಾಲೇಜುಗಳಲ್ಲಿ ಸರಳ ವಚನಗಳ ಕಂಠಪಾಠ ಮಾಡಿಸಬೇಕು.ಹಳ್ಳಿ ಹಳ್ಳಿಗಳಲ್ಲಿ ಪೂಜ್ಯರ ಸತ್ ಸಂಕಲ್ಪದಂತೆ ಬಸವಾದಿ ಶರಣರ ಚಿಂನೆಗಳನ್ನು ಹರಡಿ ಸಮಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕು ಎಂದರು.

12ನೇ ಶತಮಾನದ ಜಗಜ್ಯೋತಿ ಶ್ರೀ ಬಸವಣ್ಣ ನವರ ಶರಣ ಪರಂಪರೆ ನಮ್ಮ ಸಮಾಜದ ಎಲ್ಲ ವರ್ಗಗಳಿಗೂ ಸಂಬಂಧಿಸಿದ ತತ್ವವಾಗಿದೆ.ಅದು ಯಾರನ್ನೂ ಹೊರಗಿಡುವುದಿಲ್ಲ. ಎಲ್ಲರನ್ನು ಒಳಗೊಳ್ಳುತ್ತದೆ. ಅದು ಮತದ ಸೀಮೆಯನ್ನು ಮೀರಿ ಮಾನವತೆಯ ಸಂದೇಶವನ್ನು ತೆರೆದಿಡುತ್ತದೆ. ಶರಣ ಸಿದ್ಧಾಂತದಲ್ಲಿ ಜಾತಿ,ಮತ,ವರ್ಗ, ಪ್ರವೇಶ,ಲಿಂಗ ಇಲ್ಲ.ಇರುವುದೆಂದರೆ ಮಾನವೀಯ ಸಂಬಂಧ ಮತ್ತು ಸಹೋದರತೆ.ಇಂದಿನ ಸಮಾಜದಲ್ಲಿ ಒಡೆದುಹೋದ ಸಂಬಂಧಗಳನ್ನು ಮರುಕಟ್ಟಲು ಈ ಒಂದೇ ವಚನ ಸಾಕ.ಒಂದೇ ವಚನದಿಂದ ಸಂಕುಚಿತ ಹೃದಯವನ್ನು ವಿಶಾಲಗೊಳಿಸಬಹುದು ಎಂದರು.

ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ತತ್ವ ಕೆಲಸವನ್ನು ದೈವತ್ವಕ್ಕೆ ಸಮೀಕರಿಸುತ್ತದೆ.ಕಾಯಕವೆಂದರೆ ಕೇವಲ ಕೆಲಸವಲ್ಲ.ಅದು ಧರ್ಮ,ಅದು ಶ್ರಮಕ್ಕೆ ನೀಡುವ ಪೂಜೆ.ಅದು ಬದುಕಿನಲ್ಲಿ ಸೋಮಾರಿತನಕ್ಕೆ ಕೊಡುವ ಉತ್ತರ.ಅದು ಸಮಾಜವನ್ನು ಕಟ್ಟುವ ನೈತಿಕ ಶಕ್ತಿಯಾಗಿದೆ ಎಂದು ಬಣ್ಣಿಸಿದರು. ಸಾಹಿತ್ಯ ಸಮ್ಮೇಳನ ಸಮಿತಿ ಗೌರಾವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ,ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ,ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿದರು.

ಈ ಸಂದರ್ಭ ಗಾವಡಗೆರೆ ಗುರುಲಿಂಗಜಂಗಮದೇವರ ಮಠದ ನಟರಾಜ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ದಿಂಡಗಾಡು ಬಸವಜ್ಯೋತಿ ಮಠದ ಅಪ್ಪಾಜಿ ಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತಪೋವನ ಮನೆಹಳ್ಳಿಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿಮಠ ರುದ್ರಮುನಿ ಸ್ವಾಮೀಜಿ, ಮುಳ್ಳೂರು ಮಠದ ಬಸವಲಿಂಗ ತೋಂಟದಾರ್ಯ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಜೆ.ಎಸ್. ವಿರೂಪಾಕ್ಷಯ್ಯ,ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಬೆಂಗಳೂರು ಕದಳಿ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ್,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್,ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್,ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ,ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಮಾರಸ್ವಾಮಿ, ಮಂಡ್ಯದ ಪದ್ಮ,ಸಮಿತಿ ಉಪಾಧ್ಯಕ್ಷ ಎಚ್.ಬಿ.ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು. ಮಹೇಶ್ ಅಮೀನ್ ಒಂದೇ ಮಾತಂ ಗೀತೆ ಹಾಡಿದರು.ಕದವಿ ವೇದಿಕೆ ಸದಸ್ಯರು ನಾಡಗೀತೆ ಹಾಡಿದರು. ಶಿಕ್ಷಕಿ ಹೇಮಲತಾ, ಜಮೀರ್ ಅಹಮ್ಮದ್ ನಿರೂಪಿಸಿದರು.ಕೆ.ಎಸ್.ಮೂರ್ತಿ ಸ್ವಾಗತಿಸಿದರು.

 ಟಿ.ಜಿ.ಪ್ರೇಮಕುಮಾರ್ ವಂದಿಸಿದರು. ಕನಕಪುರ ಸ್ವಾಮೀಜಿ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಗಮನ ಸೆಳೆದ ಮೆರವಣಿಗೆ : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ವತಿಯಿಂದ ಪ್ರಥಮ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ವೈಭವಯುತ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಪಟ್ಟಣ ಬಸವೇಶ್ವರ ದೇವಾಲಯ ಆವರಣದಿಂದ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಸ ಮೆರವಣಿಗೆಯನ್ನು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚೆಕ್ಕಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರಾದ ವಿರಾಜಪೇಟೆ ಅರಮೇರಿ ಕಳಂಚೇರ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ರೈತ ಭವನಕ್ಕೆ ಕರೆತರಲಾಯಿತು.ಮೆರವಣಿಗೆಯಲ್ಲಿ ಪೂರ್ಣಕುಂಭ ಕಳಶದೊಂದಿಗೆ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡು ಗಮನ ಸೆಳೆದರು.ಮಣಜೂರು ಮಂಜುನಾಥ್ ನೇತೃತ್ವದಲ್ಲಿ ಹಾವೇರಿ ಮಹೇಶ್ವರ್ ಗೌಡ ಕಲಾವಿದರ ಪುರವಂತಿಕೆ ಕಲಾತಂಡ,ನಂಜನಗೂಡಿನ ಮಹಾದೇವಪ್ಪ ತಂಡದ ಕಂಸಾಳೆ,ಮದ್ದೂರಿನ ಮಧು ತಂಡದ ಪೂಜಾಕುಣಿತ, ಉದಯ್ ತಂಡದ ಚೆಂಡೆವಾದ್ಯ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಕಲಾ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆಯಲ್ಲಿ ಸೋಮವಾರಪೇಟೆ ಎ.ಎಸ್.ಮಹೇಶ್ ಅವರು ಬಸವಣ್ಣ ಅವರ ವೇಷಭೂಷಣ ಧರಿಸಿ ಅಲಂಕೃತ ರಥದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಆಗಮಿಸುವ‌ ಮೂಲಕ ಗಮನ ಸೆಳೆದರು.

 ಮಂಗಳವಾದ್ಯಗಳೊಂದಿಗೆ ಸಾಗಿ ಬಂದ ಮೆರವಣಿಗೆಯು ರಥ ಬೀದಿ ಮೂಲಕ, ಕಾರ್ಯಪ್ಪ ವೃತ್ತಕ್ಕೆ ಆಗಮಿತು.ನಂತರ ಬಿಎಂ ರಸ್ತೆ ಮೂಲಕ ರೈತಭವನದ‌ ಸಮ್ಮೇಳನ ವೇದಿಕೆ ಬಳಿ ಬಂದು ಅಂತ್ಯಗೊಂಡಿತು.

ಈ ಸಂದರ್ಭ ಸಾಹಿತ್ಯ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವಯ್ಯ ಸ್ವಾಮೀಜಿ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ,ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಸಮಿತಿ ಮುಖಂಡರಾದ ಶಾಂಬಶಿವಯ್ಯ,ಎಂ.ಕೆ.ಧನರಾಜು,ಎಂ.ಎಸ್.ಶಿವಾನಂದ,ಲೋಕೇಶ್,ಎಸ್.ನಂದೀಶ್,ಎಂ.ಬಿ.ಸುರೇಶ್, ಶಿವನಂಜಪ್ಪ,ಪರಮೇಶ್,ಎಂ.ಎಸ್.ಗಣೇಶ್, ಮಾರುತಿ ದಾಸಣ್ಣನವರ್,ಎ.ಎಸ್.ಮಹೇಶ್,ಡಾ.ದಿಲನ್ ಬೋಪಣ್ಣ,ಕದಳಿ ವೇದಿಕೆ ಮುಖಂಡರಾದ ಸರೋಜಾ ಆರಾಧ್ಯ,ಹೇಮಲತಾ ವಿರೂಪಾಕ್ಷ, ಉಷರಾಣಿ ಗುರುಪ್ರಸಾದ್,ಶೋಭಾರಾಣಿ,ವಿಜಯಲಕ್ಷ್ಮಿ, ರಜಿತಬೋಪಣ್ಣ ಮತ್ತಿತರರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0