ಕುಶಾಲನಗರ : ಅನುಷ್ಠಾನ ಸಮಿತಿಯ ಪ್ರಗತಿ ಪರಿಸೀಲನಾ ಸಭೆ : ತಾಲ್ಲೂಕು ಅಂಗನವಾಡಿಗಳಲ್ಲಿ ಖಾಲಿ ಇರುವ ಶಿಕ್ಷಕಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು : ಶಶಿಧರ್

Jun 25, 2026 - 09:10
 0  164
ಕುಶಾಲನಗರ : ಅನುಷ್ಠಾನ ಸಮಿತಿಯ ಪ್ರಗತಿ ಪರಿಸೀಲನಾ ಸಭೆ : ತಾಲ್ಲೂಕು ಅಂಗನವಾಡಿಗಳಲ್ಲಿ ಖಾಲಿ ಇರುವ ಶಿಕ್ಷಕಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು : ಶಶಿಧರ್

ಕುಶಾಲನಗರ : ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಸೀಲನಾ ಬುಧವಾರ ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆಯಿತು. ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆ ನಡೆದ ಸಭೆಯಲ್ಲಿ ಮೊದಲಿಗೆ ಅನುಪಾಲನ ವರದಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಇಲಾಖಾವಾರು ಅಧಿಕಾರಿಗಳು ಇಲಾಖೆಯಲ್ಲಿ ಕೈಗೊಂಡ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮುಳುಸೋಗೆ ವ್ಯಾಪ್ತಿಯಲ್ಲಿ ರಸ್ತೆ ಅಂಚಿನಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಮತ್ತು ರಸ್ತೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಮನೆಗಳ ಮಾಲೀಕರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಶಶಿಧರ್ ಚೆಸ್ಕಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಚೆಸ್ಮೆ ಸಹಾಯಕ ಎಂಜಿನಿಯರ್ ಮಂಜುನಾಥ್ ಮಾತನಾಡಿ, ಅಪಾಯಕಾರಿ ವಿದ್ಯುತ್ ಲೈನ್ ತೆರವುಗೊಳಿಸಿ ಯುಜಿ ಕೇಬಲ್ ಅಳವಡಿಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಮುಂದಿನ ದಿನಗಳಲ್ಲಿ ವಿದ್ಯುತ್ ಲೈನ್ ಬದಲಾವಣೆ ಮಾಡಿ ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗುಮ್ಮನಕೊಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಶಾಕ್ ನಿಂದ ತೊಂದರೆಗೆ ಒಳಗಾದ ಬಾಲಕಿಗೆ ಚಿಕಿತ್ಸಾ ವೆಚ್ಚ ರೂ.3.5 ಲಕ್ಷ ಹಣವನ್ನು ಭರಿಸಲಾಗಿದೆ.ಬಾಲಕಿ ಆರೋಗ್ಯ ಚೇರಿಕೆ ಕಂಡುಬಂದಿದೆ ಎಂದು ಹೇಳಿದರು.

ಕೂಡುಮಂಗಳೂರು ಹೊಸ ಲೇಔಟ್ ಬಳಿ 11 ಕೆವಿ ವಿದ್ಯುತ್ ಲೈನ್ ಹಾದು ಹೋಗಿದ್ದು, ಲೈನ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯೆ ಜೆ.ಫಿಲೋಮಿನಾ ಹೇಳಿದರು.ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಇಇ ಮಂಜುನಾಥ್ ಅವರಿಗೆ ಶಶಿಧರ್ ಸೂಚನೆ ನೀಡಿದರು. ತಾಲ್ಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರ ಗಳಲ್ಲಿ ಖಾಲಿ ಇರುವ ಕಾರ್ಯಕರ್ತೆರ ಹುದ್ದೆ ಭರ್ತಿಗೆ ಏನು ಕ್ರಮ ಕೈಗೊಂಡಿದ್ದರಿ ಎಂದು ಶಶಿಧರ್ ಮಹಿಳಾ ಮತ್ತು ‌ಮಕ್ಕಳ‌ಕಲ್ಯಾಣಾಧಿಕಾರಿ ಶ್ರೀದೇವಿಯನ್ನು ಪ್ರಶ್ನಿಸಿದರು.

 ಬಸವನಹಳ್ಳಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಸರಿಯಾಗಿ ಹಾಜರಾಗುತ್ತಿಲ್ಲ ಹಾಗೂ ವರ್ತನೆ ಕೂಡ ಸರಿಯಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಅದೇ ರೀತಿ ಜೇನುಕಲ್ಲುಬೆಟ್ಟದ ಅಂಗನವಾಡಿ ಕೇಂದ್ರದ ಶಿಕ್ಷಕಿ ಸರಿಯಾಗಿ ಕರ್ತವ್ಯ ಹಾಜರಾಗುತ್ತಿಲ್ಲ ಎಂಬ ದೂರು ಇದೆ.ನೀವು ಏನು ಕ್ರಮ ಕೈಗೊಂಡಿದ್ದಿರಿ ಎಂದು ಕೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿ ಶ್ರೀದೇವಿ ಈಗಾಗಲೇ ಶಿಕ್ಷಕಿಗೆ ಪ್ರಥಮ ನೋಟಿಸ್ ನೀಡಲಾಗಿದೆ.ಮುಂದಿನ ದಿನಗಳಲ್ಲಿ ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳದೆ ಹೋದರೆ ಎರಡನೇ ನೋಟಿಸ್‌ನೀಡಿ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಹೇಳಿದರು. ಅದೇ ರೀತಿ ಹಾರಂಗಿ ಅಂಗನವಾಡಿ ಶಿಕ್ಷಕಿ ಮಂಜುಳ ಹುದುಗೂರು ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ಬಗ್ಗೆ ಚರ್ಚೆ ನಡೆಯಿತು.ನೆಲ್ಲಿಹುದಿಕೇರಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸ್ವಯಂಪ್ರೇರಿತವಾಗಿ ನೇತ್ರಾವತಿ ಎಂಬ ಮಹಿಳೆ ಎರಡು ವರ್ಷ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದು, ಈ ಮಹಿಳೆಗೆ ಸಂಬಳ ನೀಡಲು ಕ್ರಮ ಕೈಗೊಳ್ಳಬೇಕು.ಮುಂದಿನ ದಿನಗಳಲ್ಲಿ ಹುದ್ದೆ ಭರ್ತಿಮಾಡುವಾಗ ಆಕೆಗೆ ಅವಕಾಸ ನೀಡಬೇಕು ಎಂದು ಸಮಿತಿ ಸದಸ್ಯೆ ಸುಹಾದ ಆಶ್ರಫ್ ಹೇಳಿದರು.

ನೇತ್ರಾವತಿ ಇಲಾಖೆ ವತಿಯಿಂದ ಯಾವುದೇ ಆದೇಶ ನೀಡಿಲ್ಲ.ಗೌರವಧನ ನೀಡಲು ಬರುವುದಿಲ್ಲ ಎಂದು ಶ್ರೀದೇವಿ ತಿಳಿಸಿದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ತಾಲ್ಲೂಕು ಅಧಿಕಾರಿ ಸ್ವಾತಿ ಮಾತನಾಡಿ,ಗೃಹ ಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಅರ್ಹ ಮಹಿಳೆಯರು ಗ್ರಾಮ ಒನ್ ಕೆಂದ್ರದಿಂದ ಅರ್ಜಿ ಸಲ್ಲಿಸಬೇಕು ಎಂದರು.ತಾಲ್ಲೂಕಿನಲ್ಲಿ ಅನ್ನ ಭಾಗ್ಯಯೋಜನೆಯಡಿ 1288 ಫಲಾನುಭವಿಗಳಿದ್ದಾರೆ.ಹೊಸದಾಗಿ134 ಅರ್ಜಿಗಳು ಬಂದಿದ್ದು,ಇವುಗಳಲ್ಲಿ 88 ಅನರ್ಹ ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಬಸವನಹಳ್ಳಿ ನೂತನವಾಗಿ ನಿರ್ಮಿಸಲಾದ ಬಸ್ ಡಿಪೋ ಬಹುತೇಕ ಕಾಮಗಾರಿ ಮುಗಿದಿದೆ.ಸರ್ವಿಸ್ ಕೇಂದ್ರದ ಬಳಿ ಕಾಂಕ್ರೀಟ್ ಕೆಲಸ ನಡೆಯುತ್ತಿದೆ. ಜೊತೆಗೆ ಡಿಸೇಲ್ ಬಂಕ್ ಸ್ಥಾಪನೆಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕುಶಾಲನಗರ ಬಸ್ ನಿಲ್ದಾಣದ ನಿರೀಕ್ಷಕ ಆಶೋಕ್ ತಿಳಿಸಿದರು. ಕೆಲಸ‌ ಮುಗಿದು ಆರು ತಿಂಗಳಾದರೂ ಡಿಸೇಲ್ ಬಂಕ್ ಆರಂಭಿಸದಿರುವ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಡಿಪೋ ಬಂದ ಹೊಸ ನಾಲ್ಕು ಬಸ್ ಗಳನ್ನು ಬೇರೆ ಮಾರ್ಗಗಳಿಗೆ ಬಳಕೆ ಮಾಡಲಾಗುತ್ತಿದೆ. ಯಾವಾಗ ಕೆಲಸ ಪೂರ್ಣಗೊಳಿಸುತ್ತಿರಿ ಎಂದು ಪ್ರಶ್ನಿಸಿದರು. ಡಿಪೋ ವ್ಯವಸ್ಥಾಪಕ ಹಾಜರಾಗದ ಬಗ್ಗೆ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಶಿಭೀಮಯ್ಯ, ಸದಸ್ಯರಾದ ಕೂಡಿಗೆಅಣ್ಣಯ್ಯ, ಬಿ.ಸಿ.ಮಲ್ಲಿಕಾರ್ಜುನ,ಕೆ.ಇ.ಅಬ್ದುಲ್ ರಜಾಕ್,ಜೆ.ಫಿಲೋಮಿನಾ,ಸುಹಾದ ಆಶ್ರಪ್,ಎಸ್.ಎಸ್.ವಿವೇಕಾನಂದ,ಎಸ್.ಎ.ಶ್ರೀನಿವಾಸ,ಎನ್.ಶ್ರೀನಜವಾಸ್ಕುಮಾರ್,ಯು.ಎಂ.ಕಿಶೋರ್,ಹೆಚ್.ಯು.ರಫೀಕ್ ಖಾನ್,ಎಂ.ಎ.ಆದಂ, ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ರಾಕೇಶ್, ಲೆಕ್ಕಾಧಿಕಾರಿ ಲೋಕೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಭೆ ನಡೆಯುವಾಗ ಜಿಲ್ಲಾ ಉದ್ಯೋಗ ಅಧಿಕಾರಿ ಮಂಜುನಾಥ್ ಅವರು ತಮ್ಮ ಮೊಬೈಲ್ ನಲ್ಲಿ‌ ಗೇಮ್ ಆಡುತ್ತಿರುವುದನ್ನು ಗುರುತಿಸಿದ ಸಮಿತಿ ಅಧ್ಯಕ್ಷ ಶಶಿಧರ್ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಲಾಖೆಯ ಕೆಲಸವನ್ನು ಸರಿಯಾಗಿ ನಿಭಯಿಸುವುದಿಲ್ಲ.ಅನುಪಾನ ವರದಿ ಕೂಡ ಸರಿಯಾಗಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಜುನಾಥ್ ಬಗ್ಗೆ ‌ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ‌ ತಾಲ್ಲೂಕು ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0