ಕುಶಾಲನಗರ :ನೀಟ್ ಪ್ರಶ್ನೆಪತ್ರಿಕೆ ಸೋರಿಕೆ,ವಿಪಕ್ಷ ನಾಯಕ ರಾಹುಲ್ ಗಾಂಧಿ ಬಂಧನ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಕುಶಾಲನಗರ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ,ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಇಲ್ಲಿನ ಬೈಚನಹಳ್ಳಿ ಮಾರಮ್ಮ ದೇವಸ್ಥಾನದ ಬಳಿ ಜಮಾಯಿಸಿದ ಕಾರ್ಯಕರ್ತರು ಪಕ್ಷದ ಬಾವುಟ,ಬ್ಯಾನರ್ ಹಾಗೂ ಪ್ಲೇಕಾರ್ಡ್ ಹಿಡಿದು ಮೆರವಣಿಗೆ ನಡೆಸಿದರು. ಬೈಚನಹಳ್ಳಿಯಿಂದ ಬಿಎಂ ರಸ್ತೆಯ ಮೂಲಕ ಸಾಗಿ ಫೀಲ್ಡ್ ಕಾರ್ಯಪ್ಪ,ರಥಬೀದಿ,ಮಾರುಕಟ್ಟೆ ರಸ್ತೆ ಮೂಲಕ ಸಾಗಿ ಕಾರು ನಿಲ್ದಾಣದಲ್ಲಿ ಅಂತ್ಯಗೊಂಡಿತು.
ಮೆರವಣಿ ಸಂದರ್ಭ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬಂಧನಕ್ಕೆ ಒಳಪಡಿಸಿರುವ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿ ಮತ್ತು ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ,ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಅಗ್ರಹಿಸಿ ಆಂದೋಲನ ನಿರತ ವಿದ್ಯಾರ್ಥಿ ಹಾಗೂ ಪೋಷಕರ ವಿರುದ್ದ ಪೈಶಾಚಿಕ ದಾಳಿ ನಡೆಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ದೇಶಾದ್ಯಂತ ಬಿಜೆಪಿ ಸರ್ಕಾರದ ವಿರುದ್ದ ಜನತೆ ಆಕ್ರೋಶ ಭರಿತರಾಗಿದ್ದಾರೆ. ಹಲವು ಹಗರಣಗಳಿಂದ ರೋಸಿಹೋಗಿದ್ದಾರೆ. ಜನವಿರೋಧಿ ಮೋದಿ ಸರ್ಕಾರ ಕಿತ್ತೊಗೆದು ಜನಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿಯನ್ನು ದೇಶದ ಮುಂದಿನ ಪ್ರಧಾನಿಯಾಗಿಸಬೇಕು ಎಂದು ಸಂಕಲ್ಪ ಮಾಡಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮೋದಿ ಸರ್ಕಾರವನ್ನು ಪ್ರಶ್ನಿಸುವವರ, ಹೋರಾಟ, ಚಳುವಳಿಗಳನ್ನು ಹಮ್ಮಿಕೊಳ್ಳುವವರಿಗೆ ಒಂದೊಂದು ಹಣೆಪಟ್ಟಿ ಕಟ್ಟಿ ಅವರ ಸದ್ದಡಗಿಸುವ ದಮನಕಾರಿ ನೀತಿಯನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ. ಮುಸಲ್ಮಾನರ ವಿರುದ್ದವಾಗಿ ಹಿಂದೂಗಳನ್ನು ಎತ್ತಿಕಟ್ಟಿ ದೀರ್ಘಾವಧಿಗೆ ದೇಶ ನಡೆಸಬೇಕೆನ್ನುವ ಹುನ್ನಾರ, ಚಿಂತನೆ ಫಲಕೊಡುವುದಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕೇಂದ್ರದ ವಿರುದ್ಧ ಮತ್ತೊಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಎನ್ಎಸ್ ಯುಐ ನ ಬಸವರಾಜು ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಮೋದ್ ಮುತ್ತಪ್ಪ, ವಿ.ಎಸ್.ಆನಂದ್ ಕುಮಾರ್, ಶಾಜಿ,ಸುನೀತಾ ಮಂಜುನಾಥ್,ಜೆ.ಫಿಲೋಮಿನಾ, ಪ್ರೇಮಲೀಲಾ, ಕರೀಂ, ಎಸ್.ಎಸ್.ಚಂದ್ರಶೇಖರ್, ಇರ್ಫಾನ್, ಅಜೀಜ್,ಶಶಿಭೀಮಯ್ಯ, ದಾಮೋದರ್,ಮೂರ್ತಿ, ಮೋಹನ್,ನವೀನ್ ಕುಮಾರ್, ಗೋವಿಂದಪ್ಪ,ಬಸವನಹಳ್ಳಿ ಚಂದ್ರಶೇಖರ್,ಕಾಂಗ್ರೆಸ್ ನ ವಿವಿಧ ಘಟಕ, ಸಮಿತಿಗಳ ಪದಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
