ಸೋಮವಾರಪೇಟೆ; ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ
admincoorgdaily

ಸೋಮವಾರಪೇಟೆ;ಸಾಲದ ಬಾಧೆಯಿಂದ ಬೇಸತ್ತು ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಾಂತಳ್ಳಿ ಹೋಬಳಿ ಸಿದ್ಧಾರ್ಥ ನಗರದಲ್ಲಿ ಸೋಮವಾರ ನಡೆದಿದೆ. ಮೃತನನ್ನು ಬಿ.ಪಿ. ಆನಂದ (36)ಎಂದು ಗುರುತಿಸಲಾಗಿದೆ.
ಅವರು ಖಾಸಗಿ ಫೈನಾನ್ಸ್ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಮನನೊಂದು ಈ ಕೃತ್ಯಕ್ಕೆ ಶರಣಾಗಿದ್ದಾರೆ ಎಂದು ಪತ್ನಿ ಕಾವ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುರುವಾರ ಮಧ್ಯಾಹ್ನ 4.45ರ ಸುಮಾರಿಗೆ ಕಾವ್ಯ ಅವರು ಮನೆಗೆ ವಾಪಸ್ ಬಂದಾಗ ಮನೆಯ ಒಳಗೆ ಕೊಠಡಿಯಲ್ಲಿನ ಚೂಡಿದಾರದ ವೇರ್‌ನಿಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ತಕ್ಷಣ ಸ್ಥಳೀಯರು ವಿಷಯ ತಿಳಿದು ವೇರ್ ತುಂಡರಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ, ಠಾಣಾಧಿಕಾರಿ ಖತೀಜಾ, ಮುಖ್ಯಪೇದೆ ಸತೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಮೃತ ಆನಂದ ಅವರು ಪತ್ನಿ ಕಾವ್ಯ ಹಾಗೂ 2 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ---