Kodagu

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಕಣ್ಣಂಗಾಲದಲ್ಲಿ ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

admincoorgdaily

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಕಣ್ಣಂಗಾಲದಲ್ಲಿ ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಜಟಿಲಗೊಳ್ಳುತ್ತಿರುವ ಕಾಡಾನೆಗಳ ಹಾವಳಿಗೆ ಮತ್ತೊಂದು ಅಮಾಯಕರ ಜೀವ ಬಲಿಯಾದ ಹಿನ್ನಲೆ ಪ್ರತಿಭಟನೆ ನಡೆಯಿತು.

ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ಕೂಲಿ ಕಾರ್ಮಿಕ ಅಣ್ಣಪ್ಪ (45) ಎಂಬುವವರು ಕಾಡಾನೆಯ ಭೀಕರ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ನೇರ ಹೊಣೆ ಎಂದು ಕಣ್ಣಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಬೇರೆರ ರಂಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

 ಕಾಡಾನೆ ಹಾವಳಿಯಿಂದ ರೊಚ್ಚಿಗೆದ್ದ ಕಣ್ಣಂಗಾಲ ಗ್ರಾಮಸ್ಥರು, ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಿಸಿಎಫ್, ಡಿಎಫ್‌ಓ ಬರುವವರೆಗೂ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ';

ಕಣ್ಣಂಗಾಲದ ಒಂಟಿಯಂಗಡಿ ವೃತ್ತದ ಬಳಿ ಜಮಾಯಿಸಿದ ನೂರಾರು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಭದ್ರತೆ ಒದಗಿಸಿದರೂ, ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಆಗಮಿಸಿದ್ದಕ್ಕೆ ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

   ಮಾನವ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.

    ಕಳೆದ 15 ರಿಂದ 18 ವರ್ಷಗಳಿಂದ ಆನೆ-ಮಾನವ ಸಂಘರ್ಷ ನಿರಂತರವಾಗಿದೆ. ಸಣ್ಣ ಹಾಗೂ ದೊಡ್ಡ ಹಿಡುವಳಿದಾರರ ತೋಟಗಳು ಸಂಪೂರ್ಣ ನಾಶವಾಗಿವೆ. ಜೀವ ಹೋದಾಗ ಅರಣ್ಯ ಇಲಾಖೆ ನೀಡುವ ಕೇವಲ 5-10 ಲಕ್ಷ ಪರಿಹಾರದ ಚೆಕ್‌ನಿಂದ ಕಳೆದುಕೊಂಡ ಜೀವ ಮತ್ತು ಅಪಾರ ನಷ್ಟವನ್ನು ಸರಿದೂಗಿಸಲು ಎಂದಿಗೂ ಸಾಧ್ಯವಿಲ್ಲ. ಶಾಸನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಐದಕ್ಕೂ ಹೆಚ್ಚು ಬಾರಿ ಈ ಸಮಸ್ಯೆ ಪ್ರಸ್ತಾಪಿಸಿದರೂ, "ಆನೆ ಟಾಸ್ಕ್ ಫೋರ್ಸ್ ಮಾಡಿದ್ದೇವೆ" ಎಂಬ ಹಾರಿಕೆ ಉತ್ತರ ಸಿಕ್ಕಿದೆಯೇ ಹೊರತು ಶಾಶ್ವತ ಪರಿಹಾರ ಸಿಕ್ಕಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿದ್ದ 150 ಕೋಟಿ ಹಾಗೂ 120 ಕೋಟಿ ಅನುದಾನಗಳು ಬಿಡುಗಡೆಯಾಗದೆ ಬ್ಯಾರಿಕೇಡ್ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

   ಹಿರಿಯ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮದ ಭರವಸೆ ನೀಡದಿದ್ದರೆ, ವಿರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಮಟ್ಟದ ಧರಣಿ: "ವಿಧಾನಸೌಧ ಮುತ್ತಿಗೆ":

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿ, ಮುಂಬರುವ 13ನೇ ತಾರೀಖಿನಿಂದ ಆರಂಭವಾಗುವ ಶಾಸನಸಭೆ ಅಧಿವೇಶನ ಕಳೆದು, ಕೊಡಗಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ರೈತರು ಧರಣಿ ಕೂರಬೇಕು. ಕೇವಲ 300-400 ಜನರ ಪ್ರತಿಭಟನೆಗೆ ಸರ್ಕಾರ ಕಣ್ಣು ತೆರೆಯುವುದಿಲ್ಲ. ಹೀಗಾಗಿ ಕೊಡಗಿನ 50,000 ಜನರೊಂದಿಗೆ ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಹಾಸನ (ಸಕಲೇಶಪುರ), ಚಾಮರಾಜನಗರ ಹಾಗೂ ಎಚ್.ಡಿ. ಕೋಟೆ ಭಾಗದ ಜನರನ್ನು ಒಗ್ಗೂಡಿಸಿ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಆನೆ-ಮಾನವ ಸಂಘರ್ಷಕ್ಕೆ ಹ್ಯಾಂಗಿAಗ್ ಬೇಲಿ ಹಾಗೂ ರೈಲ್ವೇ ಬ್ಯಾರಿಕೇಡ್‌ಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರದಿಂದ ಕನಿಷ್ಠ 5,000 ಕೋಟಿ ವಿಶೇಷ ಅನುದಾನ ತರಲು ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ ಎಂದರು.  

 ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಡಾನೆಗಳಿಂದ ಸಂಘರ್ಷ ಮಿತಿ ಮೀರಿದೆ. ಅರಣ್ಯದಿಂದ ಬರುವ ಆನೆಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು. ಕಾಡಾನೆಗಳು ನಾಡಿಗೆ ಬರುವುದನ್ನು ತಪ್ಪಿಸುವಲ್ಲಿ ಸರಕಾರ ವಿಫಲವಾಗಿದೆ. ಅರಣ್ಯ ಅಧಿಕಾರಿಗಳು ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. 

ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ವನ್ಯಪ್ರಾಣಿ ಹಾವಳಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು ಎಂದರು.

    ಸಾರ್ವಜನಿಕರು ತಮ್ಮ ಜಮೀನಿನ ಸಣ್ಣ ಕೆಲಸಕ್ಕೆ ಹೋದರೆ ಸತಾಯಿಸುವ ಅರಣ್ಯ ಇಲಾಖೆ, ದಲ್ಲಾಳಿಗಳು ಬಂದ ತಕ್ಷಣ ಕೆಲಸ ಮಾಡಿಕೊಡುತ್ತದೆ. ಕಾಡಿನ ಮರದ ಕಡ್ಡಿ ಮುರಿದರೆ ಸಾರ್ವಜನಿಕರ ಮೇಲೆ ಕೇಸ್ ಹಾಕುವ ಇಲಾಖೆ, ಜನರ ಜೀವ ತೆಗೆಯುವ ಆನೆಗಳನ್ನು ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ಕೇಸ್ ಏಕೆ ದಾಖಲಿಸಬಾರದು? ಎಂದು ಸ್ಥಳೀಯರು ಪ್ರಶ್ನಿಸಿದರು.

  ಘೋಷಣೆಗಳ ಸದ್ದು: ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಅರಣ್ಯ ಇಲಾಖೆಗೆ ಧಿಕ್ಕಾರ!" ಹಾಗೂ ಸಿಸಿಎಫ್ ಬರಲೇಬೇಕು!" ಎಂದು ಗಟ್ಟಿಯಾಗಿ ಘೋಷಣೆಗಳನ್ನು ಕೂಗಿ ಅರಣ್ಯ ಇಲಾಖೆ ವಿರುದ್ಧ ತಮ್ಮ ಆಕ್ರೋಶ ಪ್ರದರ್ಶಿಸಿದರು.

ಡಿಎಫ್ ಒ ಅವರು ತಡವಾಗಿ ಆಗಮಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಿಸಿಎಫ್ ಬರುವ ತನಕ ಸ್ಥಳ ಬಿಟ್ಟು ಕದಲುವುದಿಲ್ಲ, ಇನ್ನಷ್ಟು ರೈತರನ್ನು ಸೇರಿಸಿ ವಿರಾಜಪೇಟೆ ಮಡಿಕೇರಿ ಮುಖ್ಯರಸ್ತೆ ತಡೆಯುವುದಾಗಿ ಎಚ್ಚರಿಸಿದರು. ಸಿಸಿಎಫ್ ಬರುವವರೆಗೂ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. 

  ಸಭೆ ಇದೆ ಎಂದು ಸಿಸಿಎಫ್ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರು ಸ್ಥಳಕ್ಕೆ ಬರುವ ವರೆಗೆ ಇಲ್ಲಿಂದ ಕದಲುವುದಿಲ್ಲ. ನಮಗೆ ಆನೆ ಹಿಡಿಯುವ ಭರವಸೆ ಕೊಡಲೇಬೇಕು. ಆನೆಯನ್ನು ಒಂದೆಡೆಯಿಂ

ದ ಒಂದೆಡೆಗೆ ಅಟ್ಟುವ ಕೆಲಸ ಬೇಡ. ಅದನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

   ಇದೇ ಸಂದರ್ಭ ಸಿಸಿಎಫ್ ಸೋನಮ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು ಶೀಘ್ರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಕಣ್ಣಂಗಾಲ ಗ್ರಾಮಸ್ಥರು, ಊರಿನ ಪ್ರಮುಖರು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.

ವರದಿ:ರಜಿತ ಕಾರ್ಯಪ್ಪ