Kodagu

ಕಾನೂನು ಸೇವಾ ಪ್ರಾಧಿಕಾರದಿಂದ ದುರ್ಬಲರಿಗೆ ಕಾನೂನು ನೆರವು

admincoorgdaily

ಕಾನೂನು ಸೇವಾ ಪ್ರಾಧಿಕಾರದಿಂದ ದುರ್ಬಲರಿಗೆ ಕಾನೂನು ನೆರವು

ಮಡಿಕೇರಿ ಜು.22:-ಕಾನೂನು ಸೇವಾ ಪ್ರಾಧಿಕಾರವು ದುರ್ಬಲರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ದ್ಯೇಯದಂತೆ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಹೇಳಿದ್ದಾರೆ.

 ನಗರದ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಮಡಿಕೇರಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿತ ಸ್ನೇಹಾಶ್ರಯ ಸಮಿತಿ ಮತ್ತು ಓಡಿಪಿ ಸಂಸ್ಥೆಗಳ 18 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಚ್.ಐ.ವಿ. ಪೀಡಿತ ಮಕ್ಕಳ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಉಭಯ ಸಂಸ್ಥೆಗಳು ಮಹತ್ತರ ಪಾತ್ರ ವಹಿಸಿರುವುದನ್ನು ಶ್ಲಾಘಿಸಿದ ಶುಭ ಅವರು, ಸಮಾಜದ ವಿವಿಧ ಸೇವಾ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಎಚ್.ಐ.ವಿ. ಪೀಡಿತರಿಗೆ ಕಾನೂನು ಸೇವೆಯ ನೆರವು ನೀಡಲು ಪ್ರಾಧಿಕಾರ ಸದಾ ಸಿದ್ಧವಿದೆ ಎಂದು ಹೇಳಿದ ನ್ಯಾಯಾಧೀಶರಾದ ಶುಭ, ಎಚ್.ಐ.ವಿ. ಇದೆ ಎಂದು ಗೊತ್ತಾದಾಗ ಭಯ ಪಡದೇ ಕಾಯಿಲೆಯಿಂದ ಮುಕ್ತರಾಗುವ ನಿಟ್ಟಿನಲ್ಲಿ ಪೀಡಿತರು ಧೈರ್ಯದಿಂದ ವರ್ತಿಸಬೇಕೆಂದು ಸಲಹೆ ನೀಡಿದರು. ಜೀವನ ಎಂಬುದು ಸದಾ ಸಂತೋಷದಿಂದ ಇರುವುದಿಲ್ಲ. ಎಲ್ಲರ ಜೀವನದಲ್ಲಿಯೂ ಏರಿಳಿತ ಇರುತ್ತದೆ ಇಂತಹ ಸಂದರ್ಭ ಧೈರ್ಯದಿಂದ ಬದುಕು ಎದುರಿಸಬೇಕು ಎಂದು ಶುಭ ಅವರು ಕಿವಿಮಾತು ಹೇಳಿದರು.

ಓಡಿಪಿ ಸಂಸ್ಥೆ ಮೈಸೂರಿನ ನಿರ್ದೇಶಕರಾದ ಟೆನ್ನಿ ಕುರಿಯನ್ ಮಾತನಾಡಿ. ಸಮಾಜದಲ್ಲಿಂದು ಮೌಲ್ಯಗಳು ಕಡಿಮೆಯಾಗುತ್ತಿವೆ. ಹಿರಿಯರಿಗೆ ಗೌರವ ಬಾವನೆ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಜೀವನ ಮೌಲ್ಯಗಳನ್ನು ಕಲಿಸುವ ಕಾರ್ಯ ಮೊದಲು ಆಗಬೇಕೆಂದು ಸಲಹೆ ನೀಡಿದರು. ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ಸಂತಮೈಕಲರ ಚರ್ಚ್ ಧರ್ಮ ಗುರು ಪ್ಯಾಟ್ರಿಕ್ ಕ್ಲೇವಿಯರ್ ಮಾತನಾಡಿ ಎಚ್.ಐ.ವಿ. ಪೀಡಿತರಿಗೆ ಸಮಾಜದ ಸರ್ವ ವರ್ಗದ ಜನ ಸಹನೂಭೂತಿಯೊಂದಿಗೆ ನೆರವಿನ ಹಸ್ತ ಚಾಚಬೇಕೆಂದು ಮನವಿ ಮಾಡಿದರು.

ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಭಾರತದಲ್ಲಿ 70 ಸಾವಿರ ಮತ್ತು ಕರ್ನಾಟಕದಲ್ಲಿ 11 ಸಾವಿರ ಎಚ್.ಐ.ವಿ. ಪೀಡಿತರಿದ್ದಾರೆ. ಪೀಡಿತರು ಜೀವನವನ್ನು ಸವಾಲಾಗಿ ಸ್ವೀಕರಿಸಿ ಸಂತೋಷದ ಬಾಳ್ವೆ ನಡೆಸಬೇಕೆಂದು ಹೇಳಿದರು. ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಎಚ್.ಐ.ವಿ ಪೀಡಿತರಿಗೆ ಅಗತ್ಯ ನೆರವನ್ನು 18 ವರ್ಷಗಳಿಂದ ನೀಡುವ ಮೂಲಕ ಸ್ನೇಹಾಶ್ರಯ ಮತ್ತು ಓಡಿಪಿ ಸಂಸ್ಥೆಗಳು ದೇವರು ಮೆಚ್ಚುವಂತಹ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು. ಎಚ್.ಐ.ವಿ. ಪೀಡಿತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಪ್ರಯತ್ನಿಸಬೇಕು ಎಂದು ಅನಿಲ್ ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಎಚ್.ಐ.ವಿ ಪೀಡಿತರಿಗೆ ನೆರವಿನ ಮೂಲಕ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು. 18 ವರ್ಷಗಳ ಹಿಂದೆ ಸ್ನೇಹಾಶ್ರಯ ಸಂಸ್ಥೆಯ ಹುಟ್ಟಿಗೆ ಕಾರಣರಾದವರಲ್ಲಿ ಪ್ರಮುಖರಾಗಿದ್ದ ಆರೋಗ್ಯ ಅಧಿಕಾರಿ ಡಾ.ಸಿದ್ದಯ್ಯ ಅವರು ಮಾತನಾಡಿ, ವಿಶ್ವದಲ್ಲಿ ಮಾರಕ ರೋಗಗಳ ಪೈಕಿ ಎಚ್.ಐ.ವಿ. 3ನೇ ಸ್ಥಾನದಲ್ಲಿದೆ. ಈ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಸೂಕ್ತ ಆರೈಕೆಯೊಂದಿಗೆ ಮಾನಸಿಕವಾಗಿಯೂ ಧೈರ್ಯ ತುಂಬುವ ಅಗತ್ಯವಿದೆ ಎಂದರು.

ಸ್ನೇಹಾಶ್ರಯ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು,, ಮಡಿಕೇರಿಯ ಅನೇಕ ಕೊಡುಗೈ ದಾನಿಗಳ ಸಹಕಾರದಿಂದ ಸ್ನೇಹಾಶ್ರಯ 18 ವರ್ಷ ಪೂರೈಸಿದ್ದು ನೂರಾರು ಎಚ್.ಐ.ವಿ ಪೀಡಿತರಿಗೆ ದಾನಿಗಳ ಸಹಕಾರ ಜೀವನದಲ್ಲಿ ಹೊಸ ಭರವಸೆ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

 ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಎ.ಕೆ. ನವೀನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ವೇದಿಕೆಯಲ್ಲಿದ್ದರು. ದಾನಿಗಳು ಈ ಸಂದರ್ಭ ಎಚ್.ಐ.ವಿ ಪೀಡಿತ ಮಕ್ಕಳಿಗೆ ವಿವಿಧ ರೀತಿಯ ನೆರವು ನೀಡಿದರು. ಸುನಿತಾ ಮುತ್ತಣ್ಣ ಸ್ವಾಗತಿಸಿ, ಜಾಯ್ಸ್ ಮೆನೇಜಸ್ ನಿರೂಪಿಸಿದರು. ಆರೈಕೆ ಮತ್ತು ಬೆಂಬಲ ಕೇಂದ್ರದ ಜಿಲ್ಲಾ ಸಂಯೋಜಕರಾದ ಬೈನಿ ಅವರು ವಂದಿಸಿದರು.