ಕ್ಲಾಸ್‌ನಲ್ಲಿ ಪಾಠ, ವಾಟ್ಸಾಪ್‌ನಲ್ಲಿ ಡ್ರಗ್ಸ್: ಶಿಕ್ಷಕಿಯರ ಡಬಲ್ ಲೈಫ್ ರಹಸ್ಯ
ಕೋಝಿಕೋಡ್: ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ - SIT ನಡೆಸುತ್ತಿರುವ MDMA ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಪೆರಂಬ್ರಾ BRCಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಅವರನ್ನು ಮಂಗಳವಾರ ಬಂಧಿಸಲಾಗಿದೆ. ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಹಾಗೂ ಅವಲಾ ಕುಟ್ಟೋತ್ ಮೂಲದ ನೀಶ್ಮಾ ಬಂಧನದೊಂದಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಿಕ್ಷಕಿಯರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕಿ ಕೀರ್ತನಾ ಹಾಗೂ ಕಾವ್ಯಾ ಎಂಬವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ವಡಕರ ಇನ್‌ಸ್ಪೆಕ್ಟರ್ ಎ.ವಿ. ದಿನೇಶ್ ಮಾಹಿತಿ ಪ್ರಕಾರ, ಈ ಮೂವರೂ ಶಿಕ್ಷಕಿಯರು ನಿರಂತರವಾಗಿ MDMA ಸೇವನೆ ಮಾಡುತ್ತಿದ್ದುದಲ್ಲದೆ, ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆದು ಹೈಟೆಕ್ ದಂಧೆನಡೆಸುತ್ತಿದ್ದರು. ಮಾದಕ ದ್ರವ್ಯದ ಜಾಲದ ಕೊಂಡಿ ಗಲ್ಫ್ ದೇಶದ ಸಂಖ್ಯೆಗೆ ಲಿಂಕ್ ಆಗಿತ್ತು. ಗಲ್ಫ್ ಸಂಖ್ಯೆಯ ಮೂಲಕ ವಾಟ್ಸಾಪ್/ಸಂದೇಶ ಕಳುಹಿಸಿ ಬುಕಿಂಗ್ ಮಾಡಲಾಗುತ್ತಿತ್ತು.
ಹಣ ಪಾವತಿಗೆ ಕೀರ್ತನಾ ಅವರ QR ಕೋಡ್ ಬಳಸಲಾಗುತ್ತಿತ್ತು. ಪಾವತಿಯಾದ ತಕ್ಷಣ ಡ್ರಗ್ಸ್ ಅಡಗಿಸಿಟ್ಟ ಸ್ಥಳದ ಫೋಟೋ ಕಳುಹಿಸಿ ಡೆಲಿವರಿ ನೀಡಲಾಗುತ್ತಿತ್ತು. ತನಿಖೆಯಲ್ಲಿ ಕೀರ್ತನಾ ಖಾತೆಗೆ ₹14 ಲಕ್ಷ ಹಾಗೂ ಕಾವ್ಯಾ ಖಾತೆಗೆ ಕೇವಲ 5 ತಿಂಗಳಲ್ಲಿ ₹9 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ತಿಂಗಳಿಗೆ ಕೇವಲ ₹12,000 ಗುತ್ತಿಗೆ ವೇತನ ಪಡೆಯುತ್ತಿದ್ದ ಈ ಶಿಕ್ಷಕಿಯರಿಗೆ ಮಂಗಳೂರಿನ ಸ್ನೇಹಿತನೊಬ್ಬ ಈ ಜಾಲಕ್ಕೆ ಪರಿಚಯಿಸಿದ್ದ ಎನ್ನಲಾಗಿದೆ. ಇವರು ಬೆಂಗಳೂರಿಗೆ ನಡೆಸಿದ ಸರಣಿ ಪ್ರವಾಸ ಹಾಗೂ ಖರೀದಿಸಿದ ಐಷಾರಾಮಿ ಕಾರಿನ ಮೂಲದ ಕುರಿತು ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
