ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ
admincoorgdaily

ಗೋಣಿಕೊಪ್ಪಲು : ಭಾರತೀಯ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಗ್ರಂಥಾಲಯ ಹಾಗೂ ಐ ಕ್ಯೂ ಎ ಸಿ ಸಂಯುಕ್ತ ಆಶ್ರಯದಲ್ಲಿ ಗ್ರಂಥಪಾಲಕರ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ ಕಾವೇರಿಯಪ್ಪ ಹಾಗೂ ಅಥಿತಿಗಳು ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಕಾವೇರಿಯಪ್ಪ ಅವರು ಗ್ರಂಥಾಲಯದ ಆಧುನೀಕರಣಕ್ಕೆ ಡಾ.ರಂಗನಾಥನ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಓದು, ಸಾಹಿತ್ಯ ಅನ್ನುವಂಥದ್ದು ಮನುಷ್ಯನ ಬದುಕಿನಲ್ಲಿ ಮೌಲ್ಯಗಳನ್ನು ರೂಪಿಸುವಂತಹ ಒಂದು ಸಾಧನ. ಹೆಚ್ಚು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನವು ಸಮಾಜದಲ್ಲಿನ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯವನ್ನು ನೀಡುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾವಾಗ ನೀವು ಉತ್ತಮ ಓದುಗರಾಗುತ್ತಿರೋ ಆಗ ನಿಮ್ಮ ಮನಸ್ಸಲ್ಲಿರುವ ದುರ್ಗುಣಗಳು ನಾಶವಾಗುತ್ತವೆ. ತಲೆತಗ್ಗಿಸಿ ಮೊಬೈಲ್ ಅನ್ನು ನೋಡುತ್ತಾ ಕೂರುವ ಬದಲು, ಆ ಸಮಯವನ್ನು ಉತ್ತಮ ಪುಸ್ತಕವನ್ನು ಓದಲು ಮೀಸಲಿಟ್ಟಲ್ಲಿ, ಆ ವ್ಯಕ್ತಿ ಜೀವನದಲ್ಲಿ ತಲೆ ಎತ್ತಿ ನಡೆಯುವಂತಹ ಬದುಕು ಕಟ್ಟಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪ ಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ ಅವರು ಮಾತನಾಡಿ ಓದು ವ್ಯಕ್ತಿಯ ಆತ್ಮವನ್ನು ಪೋಷಿಸುವುದರ ಜೊತೆಗೆ, ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಫ್ರಾನ್ಸಿಸ್ ಬೇಕನ್ ಅವರ ಮಾತಿನಂತೆ, ಓದು ವ್ಯಕ್ತಿಯನ್ನು ಸಜ್ಜುಗೊಳಿಸುತ್ತದೆ. ಓದಿನ ಮೂಲಕ ಜ್ಞಾನವನ್ನು ಸಂಪಾದಿಸಿದಾಗ ವ್ಯಕ್ತಿಯ ಮಾತುಗಳಿಗೆ ಮೌಲ್ಯ ಹಾಗೂ ತೂಕ ಬರುತ್ತದೆ. ಜ್ಞಾನಪೂರ್ಣ ಮಾತುಗಳು ಸಮಾಜದ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಇತರರಿಗೆ ಉಪಯುಕ್ತವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್. ಎಸ್ ಮಾದಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಅರ್ಧ ಗಂಟೆ ಗ್ರಂಥಾಲಯಕ್ಕೆ ಭೇಟಿ ನೀಡಿ ದಿನಪತ್ರಿಕೆಗಳನ್ನ ಓದಿ, ಸುದ್ದಿವಾಹಿನಿಯಲ್ಲಿ ಸುದ್ದಿಗಳನ್ನು ಆಲಿಸಿ, ಪ್ರಪಂಚದಲ್ಲಿ ಆಗು ಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ ಎಂದರು.
ಕಾವೇರಿ ಕಾಲೇಜಿನ ಗ್ರಂಥಾಲಯದಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಹೆಸರಾಂತ ಲೇಖಕರ ಉತ್ತಮ ಪುಸ್ತಕಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನ ಓದುವ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಐ ಕ್ಯೂ ಎ ಸಿ ಸಂಚಾಲಕಿ ಡಾ. ನಯನ ತಮ್ಮಯ್ಯ ಮಾತನಾಡಿ, ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹದ ಸ್ಥಳವಲ್ಲ. ಜ್ಞಾನವನ್ನು ವೃದ್ಧಿಸುವ ಕೇಂದ್ರವಾಗಿದ್ದು, ಮನಸ್ಸಿಗೆ ವ್ಯಾಯಾಮ ನೀಡುವ ‘ಜಿಮ್’ನಂತಿದೆ ಎಂದರು.
ಗೂಗಲ್ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬಹುದು. ಆದರೆ ಗ್ರಂಥಾಲಯವು ಹೊಸ ಪ್ರಶ್ನೆಗಳನ್ನು ಹುಟ್ಟಿಸುವ ಮೂಲಕ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲವನ್ನು ಬೆಳೆಸುತ್ತದೆ. ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರಗಳನ್ನು ಹುಡುಕುವುದು ಕಲಿಕೆಯ ಪ್ರಮುಖ ಭಾಗವಾಗಿದೆ ಎಂದರು. ಗ್ರಂಥಪಾಲಕ ಡಾ. ಸಂತೋಷ್ ಚೌಹಾಣ್ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಇದೇ ಸಂದರ್ಭ ಅಮ್ಮಣಿಚಂಡ ಕುಟುಂಬದ ಬಗ್ಗೆ ಸಮಗ್ರ ಮಾಹಿತಿ ಇರುವ, 'ಅಮ್ಮಣಿಚಂಡ ಒಕ್ಕತ್ ರ ಚೆರಿತ್ರೆ' ಪುಸ್ತಕವನ್ನು ಚೇತನ್ ಚಿಣ್ಣಪ್ಪ ಅವರು ಗ್ರಂಥಪಾಲಕರ ಮೂಲಕ ಕಾವೇರಿ ಕಾಲೇಜು ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕಿ ಟಿ. ಕೆ. ಲತಾ, ಗ್ರಂಥಾಲಯ ಸಿಬ್ಬಂದಿ ಅನುರಾಧ, ಮನು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಕ್ರೀಷ್ಮ ಹಾಗೂ ದೇಚಮ್ಮ ಕಾರ್ಯಕ್ರಮ ನಿರೂಪಿಸಿದರು.