ಲಿವ್–ಇನ್ ಸಂಬಂಧ ದಾರುಣ ಅಂತ್ಯ: ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಬೆಂಗಳೂರು, ಡಿ. 02: ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಲಿವ್–ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಹತ್ಯೆಗೈದ ವ್ಯಕ್ತಿ ನಂತರ ತಾನೇ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಬೆಳಕಿಗೆ ಬಂದಿದೆ.
51 ವರ್ಷದ ಲಕ್ಷ್ಮೀನಾರಾಯಣ ಎಂಬಾತ, ತನ್ನೊಂದಿಗೆ ವಾಸಿಸುತ್ತಿದ್ದ 49 ವರ್ಷದ ಲಲಿತಾ ಅವರನ್ನು ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಮನೆಯ ಬಾಗಿಲು ತೆರೆದೇ ಇದ್ದುದನ್ನು ಗಮನಿಸಿದ ನೆರೆಮಾವವರು ಮನೆಯೊಳಗೆ ತಪಾಸಣೆ ನಡೆಸಿದಾಗ, ಇಬ್ಬರೂ ಮೃತಪಟ್ಟಿರುವುದು ಪತ್ತೆಯಾಯಿತು.
ಗಂಡನ ಮರಣದ ಬಳಿಕ ಲಲಿತಾ, ಲಕ್ಷ್ಮೀನಾರಾಯಣನೊಂದಿಗೆ ಬದುಕಲು ಆರಂಭಿಸಿದ್ದರು. ಅದರಂತೆ ಲಕ್ಷ್ಮೀನಾರಾಯಣ ಕೂಡ ತನ್ನ ಪತ್ನಿಯನ್ನು ಬಿಟ್ಟು ಲಲಿತಾಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇತ್ತೀಚೆಗೆ ಲಲಿತಾ ನಡತೆ ಬಗ್ಗೆ ಶಂಕೆಗೊಂಡ ಲಕ್ಷ್ಮೀನಾರಾಯಣ, ಜಗಳದ ವೇಳೆ ಕೋಪೋದ್ರಿಕ್ತನಾಗಿ ವೇಲ್‌ನಿಂದ ಕುತ್ತಿಗೆ ಬಿಗಿದು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆಯ ನಂತರ ಆತನೇ ಇದೇ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ರಾಜಗೋಪಾಲನಗರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.