ತೋಕ್ ನಮ್ಮೆ ಸ್ಪರ್ಧೆಯ ಲಾಂಛನ ಅನಾವರಣ
admincoorgdaily

ಮಡಿಕೇರಿ: ಕೊಡಗಿನ ಹೆಮ್ಮೆಯ ಪರಂಪರಾಗತ ಸ್ಪರ್ಧೆಯಾದ 2ನೇ ವರ್ಷದ ತೋಕ್ ನಮ್ಮೆ" ಸ್ಪರ್ಧೆಯ ಲಾಂಛನವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಅನಾವರಣಗೊಳಿಸಿದರು.
ಅಲೇಮಾಡ ಮನೆತನದವರು ಆಯೋಜಿಸುತ್ತಿರುವ ಈ ಬಾರಿಯ ತೋಕ್ ನಮ್ಮೆ ಸ್ಪರ್ಧೆಯ ಲಾಂಛನ ಬಿಡುಗಡೆ ಕಾರ್ಯಕ್ರಮವು ಶಾಸಕರ ಗೃಹ ಕಚೇರಿಯಲ್ಲಿ ನಡೆಯಿತು. ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, "ಕೊಡಗಿನ ಹೆಮ್ಮೆ, ಕೊಡಗಿನ ಗೌರವದ ಸಂಕೇತವಾದ ಬಂದೂಕಿಗೆ ಸಂಬಂಧಿಸಿದ ಈ ಸ್ಪರ್ಧೆಯು ನಾಡಿನ ಹಾಗೂ ಸಮುದಾಯದ ಗೌರವವನ್ನು ಸಮಾಜದಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ" ಎಂದು ಹಾರೈಸಿದರು.
ಕೊಡವ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತೋಕ್ ನಮ್ಮೆ ಸ್ಪರ್ಧೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.