State News

18 ವರ್ಷ ತುಂಬದ ವಿದ್ಯಾರ್ಥಿಗಳ ಪ್ರೇಮ–ಪ್ರಣಯ; ಮಗುವಿಗೆ ಜನ್ಮ ನೀಡಿದ ಬಾಲಕಿ

admincoorgdaily

ವನಪರ್ತಿ: ಹದಿನೆಂಟು ವರ್ಷವೂ ಆಗದ ಓದುತ್ತಿರುವ ಹುಡುಗ–ಹುಡುಗಿಯರ ಪ್ರೇಮ ಪ್ರಣಯ ಗಂಭೀರ ತಿರುವು ಪಡೆದು, ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.

ಇಂಟರ್ಮೀಡಿಯೇಟ್‌ನಲ್ಲಿ ಓದುತ್ತಿರುವ ಬಾಲಕಿ ಮತ್ತು ಒಂಬತ್ತನೇ ತರಗತಿಯ ಬಾಲಕ ಕೆಲ ತಿಂಗಳಿನಿಂದ ಪರಿಚಯವಾಗಿದ್ದರು. ನಂತರ ಪ್ರೀತಿ ಪ್ರಣಯಕ್ಕೇರುವ ವೇಳೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆದಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಗರ್ಭಧಾರಣೆ ವಿಷಯ ತಿಳಿದ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ಇಬ್ಬರೂ ಅಪ್ರಾಪ್ತ ವಯಸ್ಕರು ಎನ್ನುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ನಡುವೆ, ನವೆಂಬರ್ 14ರಂದು ಬಾಲಕಿ ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ. 

ಘಟನೆಯ ನಂತರ ಗ್ರಾಮದಲ್ಲಿ ನಡೆದ ಪಂಚಾಯಿತಿಯಲ್ಲಿ ಬಾಲಕನ ಪೋಷಕರು “ಮಗನಿಗೆ ಸಂಬಂಧವಿಲ್ಲ” ಎಂದು ವಾದಿಸಿದ್ದು, ಇಬ್ಬರ ಕುಟುಂಬಗಳ ನಡುವೆ ಗದ್ದಲ ಮೂಡಿದೆ. ಪೊಲೀಸರ ನಿರ್ಲಕ್ಷ್ಯಕ್ಕೆ ಬಾಲಕಿಯ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಜಿಲ್ಲಾ ಎಸ್‌ಪಿ ಕಚೇರಿಗೂ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.

ಮಗುವಿನ ತಂದೆಯನ್ನು ದೃಢೀಕರಿಸಲು ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಬಾಲಕಿಯ ಕುಟುಂಬ ಒತ್ತಾಯಿಸಿದೆ. ಕಾನೂನು ತಜ್ಞರ ಪ್ರಕಾರ, ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಪ್ರಕರಣ ಪೊಕ್ಸೊ ಕಾಯ್ದೆಗೆ ಬರಲಿದೆ ಎಂದು ತಿಳಿದು ಬಂದಿದೆ.