ಪ್ರೇಮಿಗಳ ದಿನದಂದೇ ಶೂಟ್ ಮಾಡಿಕೊಂಡು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಲವ್ವರ್ಸ್
admincoorgdaily

ಲಕ್ನೋ: ಪ್ರೇಮಿಗಳ ದಿನದಂದೇ ದುರಂತವೊಂದು ನಡೆದಿದ್ದು, ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ (Uttara Pradesh) ನೋಯ್ಡಾದಲ್ಲಿ (Noida) ನಡೆದಿದೆ. ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ, ತನಿಖೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದು ದೃಢವಾಗಿದೆ. ಇಬ್ಬರಿಗೂ ಗುಂಡೇಟಿನ ಗಾಯಗಳಾಗಿದ್ದು, ಮೃತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ.
ಯುವಕ ಮೊದಲು ಯುವತಿಗೆ ಗುಂಡು ಹಾರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂದು ಮೂಲಗಳು ತಿಳಿಸಿವೆ. ಯುವಕನ ಕೈಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ಇದು ಕೊಲೆ ಹಾಗೂ ಆತ್ಮಹತ್ಯೆ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸ್ತಿದ್ದಾರೆ.