ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಶಾಸಕ ಎ.ಎಸ್ ಪೊನ್ನಣ್ಣ
ಬೆಂಗಳೂರು;ಕೊಡಗು ಜಿಲ್ಲೆಗೆ ಸಂಬಂಧಿಸಿದ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿಯ ಮೊದಲ ಸಭೆ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ, ವಿಧಾನ ಸೌಧ ಕೊಠಡಿ ಸಂಖ್ಯೆ 106ರಲ್ಲಿ ಜರುಗಿತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ವಿಧಾನ ಸಭೆಯ ಮಾನ್ಯ ಸದಸ್ಯರುಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಂ.ಟಿ ಕೃಷ್ಣಪ್ಪ, ಶ್ರೀ ಅರವಿಂದ ಬೆಲ್ಲದ, ಡಾ. ಶ್ರೀನಿವಾಸ ಎನ್.ಟಿ, ಶ್ರೀ ಭೀಮಾಣ್ಣ ಟಿ. ನಾಯ್ಕ ಭಾಗವಹಿಸಿದ್ದರು.
ಕಂದಾಯ ಸಚಿವರು ಈ ತಿದ್ದುಪಡಿ ವಿಧೇಯಕದ ಕುರಿತು ಸಭೆಯಲ್ಲಿ ವಿವರಿಸಿ, ಸಧಕ-ಭಾದಕ ಕುರಿತು ಅಧಿಕಾರಿಗಳಿಂದ ವಿವರಣೆ ಪಡೆದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು, ಸಭೆಯಲ್ಲಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ವಿವರಿಸಿ, ಮಾರ್ಗೋಪಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರಾದ ಶ್ರೀ ಆದಿತ್ಯ ಆಮ್ಲ ಬಿಸ್ವಾಸ್, ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ (ವರ್ಚುವಲ್ ಮೂಲಕ), ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಅಧಿಕಾರಿಗಳು, ವಿಧಾನ ಸಭೆಯ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.