ಕೆ.ಬಾಡಗ ಗ್ರಾಮದಲ್ಲಿ 47 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಲೋಕಾರ್ಪಣೆಗೊಳಿಸಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ, ಜೂ. 26: ತಾಲ್ಲೂಕಿನ ಕೆ.ಬಾಡಗ ಗ್ರಾಮಕ್ಕೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ, ಶಾಸಕರ ವಿಶೇಷ ಅನುದಾನ 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತಾಯಿ ಭೂಮಿ ಪೈಸಾರಿ ಹಾಡಿ, ನಾಣಚ್ಚಿ ಗದ್ದೆ ಹಾಡಿ ಹಾಗೂ ಕೋಡಂಗೆ ಭಾಗದ ವಿವಿಧ ರಸ್ತೆ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು, "ಸರ್ಕಾರ ಹಾಗೂ ನಾನು ಜನಸಾಮಾನ್ಯರ ಮೂಲಸೌಕರ್ಯವಾದ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇವೆ. ಹಲವು ದಶಕಗಳಿಂದ ದುರಸ್ತಿಯಾಗದೇ ಬಳಕೆಗೆ ಯೋಗ್ಯವಲ್ಲದ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಬೇಡಿಕೆಯಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಗ್ರಾಮೀಣ ಜನರು ಆರ್ಥಿಕವಾಗಿ ಸದೃಢರಾಗಲು ಕೃಷಿಯೊಂದಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ" ಎಂದರು. ಇದೇ ವೇಳೆ ಚಂದನಕೇರೆ ಹಾಡಿಯ ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಅಲ್ಲಿನ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ಚಿಮ್ಮಣ್ಣಮಾಡ ರವಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ಜಿ.ಪಂ. ಸದಸ್ಯ ಬಾನಂಡ ಪ್ರತ್ಯು, ಮುಖಂಡರಾದ ಕಟ್ಟಿ ಕಾರ್ಯಪ್ಪ, ಪಾಲ್ವಿನ್ ಪೂಣಚ್ಚ, ಐಟಿಡಿಪಿ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

