Kodagu

ಕೊಡವ ಅಕಾಡೆಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

ಕೊಡವ ಅಕಾಡೆಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ಒಂಟಿಅಂಗಡಿ ಭಾಗದ ಕೊಡವ ಸಂಸ್ಥೆಯಲ್ಲಿ ಆಯೋಜನೆಗೊಂಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪತ್ತಾಯದಲ್ಲಿ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಭಾಗವಹಿಸಿ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ತಮ್ಮ ಸಂದೇಶದಲ್ಲಿ, ಕೊಡವ ಸಾಹಿತ್ಯ ಅಕಾಡೆಮಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಪೀಳಿಗೆಗೆ ಕೊಡವ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಮಹತ್ವದ ಅರಿವು ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು.

 ಪತ್ತಾಯ ಬಿಡುಗಡೆಯಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆದ ಸಂದರ್ಭದಲ್ಲಿ, ಸಮುದಾಯದ ಬಾಂಧವರಿಗೆ ನಮ್ಮ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಬಹು ಪುರಾತನವಾದ ಕೊಡವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಮಹತ್ತರ ಜವಾಬ್ದಾರಿ ಕೇವಲ ಅಕಾಡೆಮಿಗೆ ಮಾತ್ರವಲ್ಲದೆ ಜನಾಂಗದ ನಮ್ಮೆಲ್ಲರಿಗೂ ಸಮಾನವಾಗಿ ಇದೆ ಎಂದು ಕಿವಿಮಾತು ಹೇಳಿದರು.

ಆಧುನಿಕ ಯುಗದಲ್ಲಿ ಇಂದಿನ ಪೀಳಿಗೆ, ನಮ್ಮ ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯಿಂದ ದೂರ ಉಳಿಯುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಹೀಗೆ ಆಗಬಾರದು. ಆ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಿ ನಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಆಚಾರ-ವಿಚಾರಗಳನ್ನು ನಮ್ಮ ಯುವ ಪೀಳಿಗೆಗೆ ತಿಳಿಸುತ್ತಾ, ಅವರ ಮುಂದಿನ ಭವಿಷ್ಯದಲ್ಲಿ ಅದನ್ನು ಬೆಳೆಸುವಂತಹ ಕಾರ್ಯಕ್ಕೆ ಈಗಲೇ ನಾಂದಿ ಹಾಡಬೇಕೆಂದು ಎಲ್ಲರಲ್ಲಿ ವಿನಂತಿಸಿ ಕೊಂಡರು.

ಈ ಸಂದರ್ಭದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕೋರಂಡ ಶಿವಾಣ್ಣಿ ಬೆಳ್ಳಿಯಪ್ಪ, ಮಂಡೆಪಂಡ ರಾಬಿನ್ ಮಂದಪ್ಪ, ಶ್ರೀಮತಿ ಮುಕ್ಕಾಟಿರ ಜಮುನ ಬೆಳ್ಳಿಯಪ್ಪ, ಮಚ್ಚಾರಂಡ ಕಿರಣ್, ಕೊಡವ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖ ಉಪಸ್ಥಿತರಿದ್ದರು.