ಶನಿವಾರಸಂತೆಯಲ್ಲಿ ಆಟೋ ನಿಲ್ದಾಣಕ್ಕೆ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ
admincoorgdaily

ಶನಿವಾರಸಂತೆ: ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುವ ಆಟೋ ನಿಲ್ದಾಣಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
"ಎಲ್ಲಾ ಭಾಗದಲ್ಲೂ ಆಟೋ ಚಾಲಕರ ಸೇವೆ ಮಹತ್ವದಾಗಿದೆ. ವಿವಿಧ ಭಾಗದಲ್ಲಿ ಆಟೋ ನಿಲ್ದಾಣಗಳಿದ್ದು, ಇಲ್ಲಿಯೂ ನಿಲ್ದಾಣ ಬೇಕು ಎಂದು ಇಲ್ಲಿಯ ಆಟೋ ಚಾಲಕರ ಸಂಘ ಬಹಳ ವರ್ಷಗಳಿಂದ ಬೇಡಿಕೆ ಇಟ್ಟಿತ್ತು. ಅದರಂತೆ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಿದ್ದೇನೆ" ಎಂದು ಶಾಸಕರು ತಿಳಿಸಿದರು.
ಕ್ಷೇತ್ರದ ಗ್ರಾಮೀಣ ಭಾಗದಿಂದ ಹಿಡಿದು ಎಲ್ಲಾ ಭಾಗದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಕೆಲಸಗಳು ಈಗ ಆಗುತ್ತಿವೆ. ಶನಿವಾರಸಂತೆಯಲ್ಲಿ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವನ್ನೂ ನಿರ್ಮಿಸಲಾಗಿದೆ. ಇನ್ನಷ್ಟು ಕ್ಷೇತ್ರ ಅಭಿವೃದ್ಧಿ ಪಡಿಸುವ ಯೋಜನೆಗಳಿದ್ದು, ಹಂತ ಹಂತವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಅವರು ಭರವಸೆ ನೀಡಿದರು.
"ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಷ್ಟ ಎನ್ನುವ ವಿರೋಧಿಗಳಿಗೆ ಕ್ಷೇತ್ರ ಅಭಿವೃದ್ಧಿ ಪಡಿಸುವ ಮೂಲಕ ಉತ್ತರ ನೀಡುತ್ತಿದ್ದೇವೆ" ಎಂದು ಡಾ. ಮಂತರ್ ಗೌಡ ಹೇಳಿದರು.
ಈ ಸಂದರ್ಭ ಶನಿವಾರಸಂತೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಆದಿತ್ಯ ಗೌಡ, ಆಟೋ ಚಾಲಕರ ಸಂಘದ ಅಧ್ಯಕ್ಷ ರವಿ, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಜನಾರ್ಧನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ. ಕೆ ಚಂದ್ರು, ಶಿವಾನಂದ, ಅರ್ಚಕ ಸುಹಾಸ್ ಭಟ್, ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಚಾಲಕರು ಮುಂತಾದವರು ಹಾಜರಿದ್ದರು.