ಮೈಸೂರು ಮತ್ತು ಕೊಡಗಿನ ಪ್ರವಾಸೋದ್ಯಮ ಹಾಗೂ ಪರಂಪರೆ ಅಭಿವೃದ್ಧಿಗೆ ಮಹತ್ವದ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್ ಒಡೆಯರ್

ಮೈಸೂರು ಮತ್ತು ಕೊಡಗಿನ ಪ್ರವಾಸೋದ್ಯಮ ಹಾಗೂ ಪರಂಪರೆ ಅಭಿವೃದ್ಧಿಗೆ ಮಹತ್ವದ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್ ಒಡೆಯರ್

ಮೈಸೂರು, ಜೂನ್ 6: ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ, ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಮೈಸೂರು ಭೇಟಿಯ ಸಂದರ್ಭದಲ್ಲಿ ಮೈಸೂರು ಹಾಗೂ ಕೊಡಗಿನ ಪ್ರಮುಖ ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಮನವಿಗಳನ್ನು ಸಲ್ಲಿಸಿದರು.

ಅರ್ಜುನ ವೃತ್ತ ಅಭಿವೃದ್ಧಿಗೆ ತಾಂತ್ರಿಕ ಅನುಮೋದನೆ ಕೋರಿಕೆ;

ಮೊದಲ ಮನವಿಯಲ್ಲಿ, ಮೈಸೂರಿನ ಅರ್ಜುನ ವೃತ್ತ (ಎಲ್‌ಐಸಿ ಜಂಕ್ಷನ್) ಅಭಿವೃದ್ಧಿ ಯೋಜನೆಗೆ ತಾಂತ್ರಿಕ ಅನುಮೋದನೆ ದೊರಕುವ ಉದ್ದೇಶದಿಂದ ಯೋಜನಾ ನಿರ್ವಹಣಾ ಸಲಹೆಗಾರರನ್ನು (PMC) ನೇಮಕ ಮಾಡುವಂತೆ ಸಚಿವರನ್ನು ಕೋರಿದರು.

ಈ ಯೋಜನೆಗೆ ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ₹20 ಕೋಟಿ ಅನುದಾನ ಮಂಜೂರಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ದಂತಕಥೆಯ ಆನೆ ಅರ್ಜುನನ ಸ್ಮರಣಾರ್ಥ ಭವ್ಯ ಸ್ಮಾರಕ ನಿರ್ಮಿಸುವ ಉದ್ದೇಶ ಹೊಂದಿದೆ.

2012ರಿಂದ 2019ರವರೆಗೆ ದಸರಾ ಜಂಬೂಸವಾರಿಯಲ್ಲಿ ಮುಂಚೂಣಿ ಆನೆಯಾಗಿ ಭಾಗವಹಿಸಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ, ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ಭಾವನಾತ್ಮಕ ನೆನಪಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ ಎಂದು ಶ್ರೀ ಯದುವೀರ್ ಒಡೆಯರ್ ತಿಳಿಸಿದರು.

ಅರ್ಜುನನಿಗೆ ಸಮರ್ಪಿತವಾದ ಸ್ಮಾರಕ ನಿರ್ಮಾಣವು ಅತ್ಯಂತ ಸೂಕ್ತವಾಗಿದ್ದು, ಈ ವೃತ್ತವು ಮೈಸೂರಿನ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾಗಿರುವುದರ ಜೊತೆಗೆ ಐತಿಹಾಸಿಕ ದಸರಾ ಮೆರವಣಿಗೆಯ ಅಂತಿಮ ತಾಣವಾಗಿರುವುದರಿಂದ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಯೋಜನೆಯಡಿ ವಿಶ್ವಮಟ್ಟದ ವಿನ್ಯಾಸ, ವಾಸ್ತುಶಿಲ್ಪ, ಸಂಚಾರ ನಿರ್ವಹಣೆ, ಭೂದೃಶ್ಯ ಅಭಿವೃದ್ಧಿ ಹಾಗೂ ಸಮಯೋಚಿತ ಅನುಷ್ಠಾನಕ್ಕೆ ಅಗತ್ಯವಿರುವ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರ ಅನುಮೋದನೆಗಾಗಿ ಮನವಿ ಸಲ್ಲಿಸಲಾಗಿದೆ.

ಮಡಿಕೇರಿ ಕೋಟೆಯ ಸಮಗ್ರ ಅಭಿವೃದ್ಧಿಗೆ ಮನವಿ

ಇನ್ನೊಂದು ಮನವಿಯಲ್ಲಿ, ಕೊಡಗಿನ ಐತಿಹಾಸಿಕ ಮಡಿಕೇರಿ ಕೋಟೆಯ ಸಮಗ್ರ ನವೀಕರಣ, ಸಂರಕ್ಷಣೆ ಹಾಗೂ ತಾಂತ್ರಿಕ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದರು.

ಕೊಡಗಿನ ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪದ ವೈಭವದ ಪ್ರತೀಕವಾಗಿರುವ ಈ ಕೋಟೆ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ.

ಪ್ರಸ್ತಾವಿತ ಯೋಜನೆಯ ಪ್ರಮುಖ ಅಂಶಗಳು:

• ಐತಿಹಾಸಿಕ ಕಟ್ಟಡಗಳ ವೈಜ್ಞಾನಿಕ ರಕ್ಷಣೆ ಮತ್ತು ಪುನಶ್ಚೇತನ

• ಆಧುನಿಕ ಪರಂಪರೆ ವಸ್ತುಸಂಗ್ರಹಾಲಯದ ಸ್ಥಾಪನೆ

• ಡಿಜಿಟಲ್ ಮಾಹಿತಿ ವ್ಯವಸ್ಥೆಗಳು ಮತ್ತು ಬಹುಭಾಷಾ ಆಡಿಯೋ ಮಾರ್ಗದರ್ಶಿಗಳ ಅಳವಡಿಕೆ

• ಸೌಂಡ್ ಅಂಡ್ ಲೈಟ್ ಶೋ (Sound & Light Show) ಆರಂಭ

• ಪರಿಸರ ಸ್ನೇಹಿ ಪಾದಚಾರಿ ಮಾರ್ಗಗಳು ಮತ್ತು ಸುಂದರೀಕರಣ

• ವಾಹನ ನಿಲುಗಡೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿ

ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ;

ಈ ಎರಡೂ ಯೋಜನೆಗಳು ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಮೈಸೂರು ಹಾಗೂ ಕೊಡಗಿನ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿವೆ ಎಂದು ಶ್ರೀ ಯದುವೀರ್ ವಾಡಿಯಾರ್ ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಅಗತ್ಯ ಸಮೀಕ್ಷೆಗಳನ್ನು ಕೈಗೊಂಡು ಸೂಕ್ತ ಆರ್ಥಿಕ ನೆರವು ನೀಡುವಂತೆ ಅವರು ಸಚಿವಾಲಯವನ್ನು ಮನವಿ ಮಾಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ತಾವು ನಿರಂತರವಾಗಿ ಬದ್ಧರಾಗಿರುವುದಾಗಿ ಪುನರುಚ್ಚರಿಸಿದ ಅವರು, ಈ ಭಾಗದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿ ಬೆಳೆಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.