ಮಡಿಕೇರಿ:ಬ್ಯಾಂಕ್ ಖಾತೆ ದುರ್ಬಳಕೆ ಮಾಡಿ 35 ಲಕ್ಷ ಸೈಬರ್ ವಂಚನೆ: ಆರೋಪಿ ಬಂಧನ

Jul 17, 2026 - 12:00
 0  654
ಮಡಿಕೇರಿ:ಬ್ಯಾಂಕ್ ಖಾತೆ ದುರ್ಬಳಕೆ ಮಾಡಿ 35 ಲಕ್ಷ ಸೈಬರ್ ವಂಚನೆ: ಆರೋಪಿ ಬಂಧನ

ಮಡಿಕೇರಿ: ವಿದ್ಯಾರ್ಥಿ ವೇತನ, ಮನೆ ಬಾಡಿಗೆ ಸೇರಿದಂತೆ ಹಲವು ಕಾರಣಗಳನ್ನು ಹೇಳಿ ಜನರಿಂದ ಬ್ಯಾಂಕ್ ಖಾತೆಗಳನ್ನು ಪಡೆದು ಸೈಬರ್ ವಂಚನೆಗೆ ಬಳಸುತ್ತಿದ್ದ ಪ್ರಕರಣದಲ್ಲಿ ಕೊಡಗು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ಆರೋಪಿಯೊಬ್ಬನನ್ನು ಬಂಧಿಸಿದೆ.

ದಿನಾಂಕ: 13-07-2026* ಈಚಲುಬೀಡು ಗ್ರಾಮ, ಯಸಳೂರು ನಿವಾಸಿ ಕರಣ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ವಿದ್ಯಾರ್ಥಿ ವೇತನ, ಮನೆ ಸಾಲ ಸೇರಿದಂತೆ ವಿವಿಧ ಕಾರಣಗಳಿಗೆ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ, ಆ ಖಾತೆಗಳನ್ನು ತಾನೇ ನಿರ್ವಹಿಸಿ ಸೈಬರ್ ವಂಚನೆಗೆ ಬಳಸುತ್ತಿದ್ದ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸದರಿ ಖಾತೆಗಳಲ್ಲಿ ಸುಮಾರು 35 ಲಕ್ಷ ರೂಪಾಯಿಗೂ ಅಧಿಕ ಹಣದ ವರ್ಗಾವಣೆ ನಡೆದಿರುವುದು ಕಂಡುಬಂದಿದೆ.

 ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣವನ್ನು ಡಿವೈಎಸ್ಪಿ ಐ.ಪಿ.ಮೇದಪ್ಪ ಮತ್ತು ಸೈಬರ್ ಕ್ರೈಂ ಠಾಣೆ ಸಿಬ್ಬಂದಿ ತನಿಖೆ ನಡೆಸಿದ್ದಾರೆ. ಆರೋಪಿಯನ್ನು ಪತ್ತೆ ಮಾಡುವಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿದ್ದಾರೆ.

ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯನ್ನು ಬೇರೆಯವರಿಗೆ ಬಳಸಲು ನೀಡಬಾರದು. ಹಾಗೆ ನೀಡಿದಲ್ಲಿ ಆ ಖಾತೆಗಳನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿದ್ದು ಕಂಡುಬಂದರೆ ಖಾತೆದಾರರ ವಿರುದ್ಧವೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿಂದುಮಣಿ ತಿಳಿಸಿದ್ದಾರೆ. ---

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0